ಉಡುಪಿ: ಸಾಧಿಸುವ ಛಲವೊಂದಿದ್ದರೆ ಸಾಧನೆಗೆ ಯಾವುದು ಅಡ್ಡಿಯಲ್ಲ. ಮನುಷ್ಯ ಜೀವನದಲ್ಲಿ ಯಾವುದು ಅಸಾಧ್ಯವಲ್ಲ ಅಂತ ತೋರಿಸಿಕೊಟ್ಟಿದ್ದಾರೆ ಉಡುಪಿ ಗುಂಡಿಬೈಲು ನಿವಾಸಿ ಸೌಮ್ಯ ಅಶ್ವಿತ್. ಬಾಲ್ಯದಲ್ಲಿ ಸಾಮಾನ್ಯರಂತೆ ಇದ್ದ ಈಕೆಗೆ ಸ್ನಾತಕೋತ್ತರ ಪದವಿ ಓದುತ್ತಿರುವಾಗ ಮ್ಯಾಕ್ಯೂಲರ್ ಡಿಜನರೇಷನ್ (macular degeneration) ಎನ್ನುವ ಕಣ್ಣಿನ ಸಮಸ್ಯೆಗೆ ಗುರಿಯಾಗಿದ್ದರು. ಎದುರು ನಿಂತವರೇ ಕಾಣದಷ್ಟು ಕುರುಡುತನ, ಸಮೀಪದ ವಸ್ತು ಕೂಡ ಕಾಣೋದು ಅಲ್ಪ ಸ್ವಲ್ಪ, ರಾತ್ರಿ ಸಂಪೂರ್ಣ ಕುರುಡುತನ ಆಕೆಗಿತ್ತು.
ಇಂತಹ ಮಾರಕ ಕಾಯಿಲೆಗೆ ಮದ್ದಿಲ್ಲ. ಹಾಗಂತ ತನ್ನ ಜೀವನ ಮುಗಿತು ಅಂತ ಸುಮ್ಮನೆ ಕುಳಿತಿಲ್ಲ. ತನ್ನ ಆಸಕ್ತಿಯ ಸಾಹಿತ್ಯ ಕಡೆ ಮತ್ತಷ್ಟು ತೊಡಗಿಸಿಕೊಳ್ಳತ್ತಾಳೆ. ಇದರ ಪ್ರತಿಫಲವೇ 'ಹಿರಿಮನೆ ಎಸ್ಟೇಟ್', 'ಆಗ ಸಂಜೆಯಾಗಿತ್ತು', 'ಕತ್ತಲಲ್ಲೊಂದು ಕಿರಣ' ಎನ್ನುವ ಮೂರು ಅದ್ಭುತ ಪತ್ತೆದಾರಿ ಕಾದಂಬರಿಗಳು.
ಇನ್ನೊಂದು ಕಾದಂಬರಿ ತಿಂಗಳೊಳಗೆ ಬರಲಿದೆ. ಕಾದಂಬರಿ ಬರೆಯೋಕೆ ಸಾಧ್ಯವಾಗದ ಸೌಮ್ಯ ಬೇರೊಬ್ಬರಿಗೆ ವಾಯ್ಸ್ ಮೆಸೇಜ್ ಮಾಡಿ ಅವರ ಸಹಾಯ ಪಡೆದು ಕಾದಂಬರಿ ರಚಿಸಿದ್ದಾರೆ.
ನಟ ರಕ್ಷಿತ್ ಶೆಟ್ಟಿ ಭೇಟಿ
ಸೌಮ್ಯ ಅವರಿಗೆ ಅಂಧತ್ವ ಇದ್ರೂ ಕೂಡ ವಿದೇಶ ಕಂಪನಿಯೊಂದರ ಪ್ರಾಜೆಕ್ಟ್ ವರ್ಕ್ ಅನ್ನು ಮನೆಯಲ್ಲಿಯೇ ಕುಳಿತು ಮಾಡುತ್ತಿದ್ದಾರೆ. ಹಲವು ಕಡೆಗಳಲ್ಲಿ ಸ್ಫೂರ್ತಿ ತುಂಬುವ ಭಾಷಣ ಮಾಡಿ ಯುವ ಜನತೆಗೆ ಜೀವನೋತ್ಸವ ತುಂಬುತ್ತಿದ್ದಾರೆ.
ಇಂತಹ ವಿಶೇಷ ಸಾಧಕಿಯನ್ನು ಗುರುತಿಸಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ಸೌಮ್ಯ ಅವರ ಹುಟ್ಟುಹಬ್ಬಕ್ಕೆ ವಿಡಿಯೋ ಕಾಲ್ ಮಾಡಿ ಶುಭಾಶಯ ತಿಳಿಸಿದ್ದಾರೆ. ಅಲ್ಲದೆ, ಮುಂದಿನ ವಾರ ಊರಿಗೆ ಬಂದಾಗ ಮೀಟ್ ಆಗುವ ಭರವಸೆ ನೀಡಿದ್ದಾರೆ. ಅಷ್ಟೆ ಅಲ್ಲ, ಭೇಟಿಯಾದಾಗ ಸೌಮ್ಯ ಅವರ ಕಾದಂಬರಿಯೊಂದನ್ನು ಸಿನಿಮಾ ಮಾಡುವ ಬಯಕೆಯನ್ನು ಸಿಂಪಲ್ ಸ್ಟಾರ್ ಮುಂದಿಡಲಿದ್ದಾರಂತೆ.
ಎಲ್ಲಾ ಸರಿ ಇದ್ದೂ ಅವಕಾಶ ಇಲ್ಲ ಅಂತ ಕುಂಟು ನೆಪ ಹೇಳಿಕೊಂಡು ಕಾಲ ಕಳೆಯುವ ಇಂದಿನ ದಿನಗಳಲ್ಲಿ ಅಂಧತ್ವ ಇದ್ರೂ ಸಾಧಿಸುತ್ತಿರುವ ಸೌಮ್ಯರವರ ಸಾಧನೆ ನಮಗೆಲ್ಲ ಸ್ಫೂರ್ತಿ. ಇಂತಹ ಮಹಿಳೆಯನ್ನು ಗುರುತಿಸಿದ್ದು, ರಕ್ಷಿತ್ ಶೆಟ್ರ ಸಿಂಪ್ಲಿಸಿಟಿಗೆ ಸಾಕ್ಷಿ.