ಉಡುಪಿ: ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿರುವ ಯುವಕನೋರ್ವ ವೈದ್ಯರು ಸಲಹೆಯನ್ನೂ ಲೆಕ್ಕಿಸದೇ ಇಂದು ತನ್ನ ಹಕ್ಕು ಚಲಾಯಿಸಿ ಬೇರೆಯವರಿಗೂ ಮಾದರಿಯಾಗಿದ್ದಾರೆ. ಆಂಬುಲೆನ್ಸ್ ನಲ್ಲೇ ಮತಗಟ್ಟೆಗೆ ಬಂದು ಯುವಕ ಮತ ಹಾಕಿರುವ ಅಪರೂಪದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.
ಕುಂದಾಪುರ ತಾಲೂಕು ಉಳ್ತೂರಿನ ಯುವಕ ಜಯಶೀಲ್ ಗಾಯಗೊಂಡಿದ್ದರೂ ಪೋಲಿಂಗ್ ಬೂತ್ಗೆ ಬಂದು ಮತದಾನ ಚಲಾಯಿಸಿದ್ದಾರೆ. ಜಯಶೀಲ್ಗೆ ಎರಡು ವಾರಗಳ ಹಿಂದೆ ಅಪಘಾತವಾಗಿತ್ತು. ಇದರಿಂದ ಬಲಗಾಲಿಗೆ ತೀವ್ರ ಗಾಯವಾಗಿದ್ದು, 3 ತಿಂಗಳುಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದರು. ಆದರೆ ತಾನು ಮತ ಹಾಕಲೇಬೇಕು ಎಂದು ಕುಟುಂಬಸ್ಥರಲ್ಲಿ ಜಯಶೀಲ್ ಒತ್ತಾಯಿಸಿದ್ದರು. ಕೊನೆಗೆ ಗೆಳೆಯರೆಲ್ಲ ಸೇರಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ್ದರು.
ಈ ಮೂಲಕ ಮತದಾನಕ್ಕೆ ಹಿಂದೇಟು ಹಾಕುವವರಿಗೆ ಜಯಶೀಲ್ ಮಾದರಿಯಾದ್ದಾರೆ. ಸ್ಟ್ರೆಚ್ಚರ್ನಲ್ಲಿ ಮಲಗಿಕೊಂಡೇ ಮತದಾನ ಮಾಡಿ ಜಯಶೀಲ್ ಪೂಜಾರಿ ಎಲ್ಲರಿಗೂ ಒಂದು ಸಂದೇಶ ರವಾನಿಸಿದ್ದಾರೆ. ಮತದಾನದ ಬೆಲೆ ಏನು ಎಂಬುದನ್ನು ಇವರು ಸಾರಿ ಹೇಳಿದ್ದಾರೆ. ಮತಗಟ್ಟೆ ಅಧಿಕಾರಿಗಳು ಕೂಡಾ ಜಯಶೀಲ್ ಅವರ ಮತದಾನದ ಉತ್ಸುಕತೆಯನ್ನು ಕೊಂಡಾಡಿದ್ದಾರೆ.