ಉಡುಪಿ: ಹಲ್ಲೆ ನಡೆಸಿ ಕೊಲೆ ಯತ್ನ ಹಾಗೂ ಸುಲಿಗೆ ಮಾಡುತ್ತಿದ್ದ ಪಡ್ಡೆ ಹುಡುಗರ ಗ್ಯಾಂಗ್ ಅನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಮೊಹಮ್ಮದ್ ಆಶಿಕ್(19), ಮಹಮ್ಮದ್ ಆಸಿಫ್ ಯಾನೆ ರಮೀಝ್(30), ಮಿಸ್ವಾ(22), ಇಜಾಜ್ ಅಹಮ್ಮದ್(19), ದಾವುದ್ ಇಬ್ರಾಹಿಂ(26) ಬಂಧಿತ ಆರೋಪಿಗಳು. ಈಗಾಗಲೇ ಇವರ ಮೇಲೆ ಮಣಿಪಾಲ, ಉಡುಪಿ ನಗರ ಠಾಣೆಯಲ್ಲೂ ಸುಲಿಗೆ ಹಾಗೂ ಕೊಲೆ ಯತ್ನ ಪ್ರಕರಣಗಳು ದಾಖಲಾಗಿದ್ದು, ಸದ್ಯ ಪೊಲೀಸರ ವಶವಾಗಿದ್ದಾರೆ.
ಖದೀಮರು ದ್ವಿಚಕ್ರ ವಾಹನಗಳಲ್ಲಿ ಬಂದು ಚೂರಿ, ಸ್ಕ್ರೂ ಡ್ರೈವರ್ನಿಂದ ಹಲ್ಲೆ ನಡೆಸಿ ಹಣ, ಮೊಬೈಲ್, ಪರ್ಸ್ ದೋಚಿ ಪರಾರಿಯಾಗುತ್ತಿದ್ದರು. ಬಂಧಿತ ಆರೋಪಿಗಳಿಂದ ಬೈಕ್, ಚೂರಿ, ಮೊಬೈಲ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಜೊತೆಗೆ ಬೆಂಗಳೂರಿನಿಂದ ಕಳ್ಳತನ ಮಾಡಿದ್ದ ಒಂದು ಬುಲೆಟ್ ಬೈಕ್ ಅನ್ನು ಸಹ ವಶಕ್ಕೆ ಪಡೆಯಲಾಗಿದೆ.
ಟೀಂ ಗರುಡ ಎಂಬ ಹೆಸರಿನಲ್ಲಿ ಪಡ್ಡೆ ಹುಡುಗರ ಗುಂಪೊಂದು ಗ್ಯಾಂಗ್ ಮಾಡಿಕೊಂಡಿದ್ದರು. ಆಶಿಕ್ ಇತ್ತೀಚೆಗಷ್ಟೇ ಮಣಿಪಾಲ ಠಾಣಾ ವ್ಯಾಪ್ತಿಯ ಅಲೆವೂರಿನಲ್ಲಿ ರಸ್ತೆಯಲ್ಲಿ ಬರುತ್ತಿದ್ದ ವ್ಯಕ್ತಿ ಮೇಲೆ ಹಣಕ್ಕಾಗಿ ಕೊಲೆ ಯತ್ನ ನಡೆಸಿ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದ ಎಂದು ಎಸ್ಪಿ ವಿಷ್ಣುವರ್ಧನ್ ಮಾಹಿತಿ ನೀಡಿದ್ದಾರೆ.