ಉಡುಪಿ : ಕರಾವಳಿಯ ವಿಶೇಷ ಸಂಸ್ಕೃತಿಗೆ ಇಲ್ಲಿನ ಮೂಲ ನಿವಾಸಿಗಳ ಕೊಡುಗೆ ಅನನ್ಯ. ಹಿಂದಿನ ದಿನಗಳಲ್ಲಿ ದೈನಂದಿನ ವ್ಯವಹಾರಕ್ಕೆ ಅಗತ್ಯವಾದ ವಸ್ತುಗಳನ್ನು ಜನರೇ ತಯಾರಿಸುತ್ತಿದ್ದರು.
ಅವರಿಗೆ ಅದೊಂದು ಬದುಕಾಗಿ, ಕಲೆಯೂ ಆಗಿತ್ತು. ಆದರೆ, ಆಧುನಿಕ ಭರಾಟೆಯಲ್ಲಿ ವಸ್ತು ಪ್ರದರ್ಶನಗಳ ವಸ್ತುವಾಗಿಬಿಟ್ಟಿದೆ. ಅಂತಹ ಮೂಲ ನಿವಾಸಿಗಳ ಸಂಸ್ಕೃತಿ, ಸಂಪ್ರದಾಯ, ಕಲಾ ಪ್ರದರ್ಶನವನ್ನು ಅನಾವರಣಕ್ಕೆ ಕಡಲತಡಿ ಸಾಕ್ಷಿಯಾಗಿದೆ.
ದೋಸೆ ಹಾಕುವ ಬುಟ್ಟಿ, ಹಬೆ ಹೋಗುವ ಮುಚ್ಚುಳ, ಮರದ ನಾರಿನಿಂದ ತಯಾರಾದ ಬುಟ್ಟಿ, ತೆಂಗಿನ ನಾರಿನ ಗೆರಸಿ, ಹೂ-ಹಣ್ಣು ಸಂಗ್ರಹಿಸಲು ಸಹಾಯವಾಗುವ ಬುಟ್ಟಿ ಹೀಗೆ ನಾನಾ ಬಗೆ ಗುಡಿ ಕೈಗಾರಿಕಾ ವಸ್ತುಗಳು, ಸಿದ್ದ ಪಡಿಸುತ್ತಿರುವ ಪರಿಣಿತರು ಕರಾವಳಿಯ ಮೂಲ ನಿವಾಸಿಗಳಾದ ಕೊರಗ ಸಮುದಾಯದವರು.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕೊರಗ ಸಮುದಾಯದ ವಿಶಿಷ್ಟ ಕಾರ್ಯವನ್ನು ಉಡುಪಿ ಜಿಲ್ಲಾಡಳಿತ ನಡೆಸಿಕೊಟ್ಟಿದೆ. ನೂರಾರು ಮಂದಿ ಕೊರಗ ಸಮುದಾಯದವರು ಸೇರಿ ಬಳ್ಳಿ ನಾರುಗಳನ್ನು ಬಳಸಿ ವಿಶೇಷ ವಸ್ತುಗಳ ತಯಾರಿಸಿ ಗಮನ ಸೆಳೆದಿದ್ದಾರೆ. ಮೂರು ದಿನಗಳ ಕ್ರೀಡಾಕೂಟ ಸಹಿತ ವಿವಿಧ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಕೊರಗ ಸಂಪ್ರದಾಯ, ಜೀವನ ಶೈಲಿ ಬಿಂಬಿಸುವ ಹಲವು ಕರಕುಶಲ ವಸ್ತುಗಳ ಪ್ರದರ್ಶನ ಮಾಡಲಾಗಿತ್ತು. ಸಂಪೂರ್ಣ ನೈಸರ್ಗಿಕವಾಗಿ ತಯಾರಾಗಿದ್ದ ವಸ್ತುಗಳು ನೋಡಗರ ಆಕರ್ಷಣೀಯ ಕೇಂದ್ರವಾದವು.
ಅಲ್ಲದೆ ನೂರಾರಿ ಮಂದಿ ಏಕಕಾಲದಲ್ಲಿ ಸ್ಥಳದಲ್ಲಿಯೇ ಈ ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ತೊಡಗಿದ್ದರು. ಪಾರಂಪರಿಕವಾಗಿ ಈ ಕಾರ್ಯ ಮಾಡಿಕೊಂಡು ಬಂದಿರುವ ಕೊರಗ ಸಮುದಾಯದವರು ಇಂದಿಗೂ ಪ್ರಕೃತಿಯನ್ನೇ ನಂಬಿ ಬದುಕುತ್ತಿದ್ದಾರೆ.
ಇದನ್ನೂ ಓದಿ: ಪ್ರಧಾನಮಂತ್ರಿ ಜನೌಷಧಿ ಮಳಿಗೆಗಳು ಬಡರೋಗಿಗಳ ಆಶಾಕಿರಣ : ಸಂಜೀವ ಮಠಂದೂರು