ಉಡುಪಿ: ಹಿಜಾಬ್ ವಿವಾದದ ಬೆನ್ನಲ್ಲೇ ಇಂದು ಕಾಲೇಜು ಆರಂಭವಾಗುತ್ತಿದ್ದು ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿನ್ನೆ ಶಾಂತಿ ಸಭೆ ನಡೆಸಲಾಗಿದ್ದು, ಜಿಲ್ಲೆಯಲ್ಲಿ 700 ಕ್ಕೂ ಹೆಚ್ಚು ಪೊಲೀಸ ಭದ್ರತೆ ಕಲ್ಪಿಸಲಾಗಿದೆ ಎಂದು ಡಿಸಿ ಕೂರ್ಮರಾವ್ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲರೂ ಹೈಕೋರ್ಟ್ ಆದೇಶ ಪಾಲಿಸಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ವಸ್ತ್ರಸಂಹಿತೆ ಪಾಲನೆ ಸಂಬಂಧ ವಿವಾದವು ಈಗಾಗಲೇ ನ್ಯಾಯಾಲಯದ ಮುಂದಿದ್ದು, ಕೆಲವೇ ದಿನಗಳಲ್ಲಿ ಪೂರ್ಣ ಪ್ರಮಾಣದ ಆದೇಶ ಬರಲಿದೆ. ಪ್ರಸ್ತುತ ನ್ಯಾಯಾಲಯವು ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಮಧ್ಯಂತರ ಆದೇಶವನ್ನು ನೀಡಿದ್ದು, ಇದನ್ನು ಪಾಲನೆ ಮಾಡುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯವಾಗಿದೆ ಎಂದರು.
ಮಧ್ಯಂತರ ಆದೇಶದಲ್ಲಿ ನ್ಯಾಯಾಲಯವು ಶಾಲಾ ಕಾಲೇಜುಗಳಲ್ಲಿ ಶಾಲಾಭಿವೃದ್ಧಿ ಸಮಿತಿಗಳು ಸಮವಸ್ತ್ರ ಸಂಹಿತೆಯನ್ನು ಈ ಹಿಂದೆ ಜಾರಿ ತಂದಿದ್ದರೆ ಅದರ ಪಾಲನೆಯನ್ನು ಚಾಚೂ ತಪ್ಪದೇ ಮಾಡಬೇಕಾಗುತ್ತದೆ. ಕಾಲೇಜಿನ ವಾತಾವರಣವನ್ನು ಯಾರೂ ಕೆಡಿಸಬಾರದು. ಉಡುಪಿಯಲ್ಲಿ ಸೂಕ್ತ ಬಂದೋಬಸ್ತ್ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ ಎಲ್ಲಾ ಠಾಣೆಗಳಲ್ಲೂ ಮಹಿಳಾ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಕಾನೂನು ಕೈಗೆತ್ತಿಕೊಂಡರೆ ಕ್ರಮ ಕೈಗೊಳ್ಳುಲಾಗುತ್ತದೆ. ಜಿಲ್ಲೆಯಲ್ಲಿ 700 ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗಿದೆ ಎಂದರು.
ಶಾಂತಿ ಸಭೆಯಲ್ಲಿ ಉಡುಪಿ ಎಸ್ಪಿ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಹಿಂದೂ ಸಂಘಟನೆ, ಮುಸ್ಲಿಂ ಸಂಘಟನೆ ಮುಖಂಡರು ಹಾಗೂ ಸಾಮಾಜಿಕ ಕಾರ್ಯಕರ್ತರು ಭಾಗಿಯಾಗಿದ್ದರು.