ಉಡುಪಿ: ಡೆಡ್ಲಿ ಕೊರೊನಾ ವೈರಸ್ ಜಿಲ್ಲೆಯಲ್ಲಿ ಸರಣಿ ಬಲಿಯನ್ನು ಪಡೆಯಲು ಆರಂಭಿಸಿದ್ದು, ಉಡುಪಿ ಮತ್ತು ಕುಂದಾಪುರಗಳಲ್ಲಿ ಮೂವರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಟಿಎಂಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಕುಕ್ಕೆಹಳ್ಳಿಯ 49 ವರ್ಷದ ವ್ಯಕ್ತಿ ಕೋವಿಡ್ ಪಾಸಿಟಿವ್‌ನಿಂದ ಮೃತ ಪಟ್ಟಿದ್ದಾರೆ. ಹೈಶುಗರ್‌ನಿಂದಾಗಿ ಅಸ್ವಸ್ಥರಾಗಿದ್ದ ಅವರನ್ನು ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್ ಗೆ ದಾಖಲಿಸಿದ ವೇಳೆ ಅವರನ್ನು ಪರೀಕ್ಷೆಗೊಳಪಡಿಸಿದಾಗ ಕೊರೊನಾ ಸೋಂಕು ಕಂಡುಬಂದಿದ್ದು, ಅವರನ್ನು ನಿನ್ನೆ ರಾತ್ರಿಯೇ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ನಿನ್ನೆ ರಾತ್ರಿ ಕುಂದಾಪುರದಲ್ಲಿ ಸೋಂಕಿನಿಂದ ಮತ್ತೋರ್ವರು ಸಾವನಪ್ಪಿದ್ದಾರೆ. ಮರವಂತೆಯ 58 ವರ್ಷದ ವ್ಯಕ್ತಿ ತೀವ್ರತರ ಅಸ್ತಮಾದಿಂದ ನರಳುತ್ತಿದ್ದು, ಅವರನ್ನು ಕೋವಿಡ್ ಪರೀಕ್ಷೆಗೊಳಪಡಿಸಿದಾಗ ಕೊರೊನಾ ಪಾಸಿಟಿವ್ ಕಂಡುಬಂದಿತ್ತು. ಆದರೆ ಚಿಕಿತ್ಸೆ ಪ್ರಾರಂಭಿಸುವ ವೇಳೆಗಾಗಲೆ ಅವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಈ ನಡುವೆ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಅಂಕೋಲದ ವ್ಯಕ್ತಿಯೊಬ್ಬರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು, ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅವರ ಅಂತ್ಯಕ್ರಿಯೆಯನ್ನು ಬುಧವಾರ ಉಡುಪಿ ಬೀಡಿನಗುಡ್ಡೆಯಲ್ಲಿ ಕೋವಿಡ್ ಮಾರ್ಗಸೂಚಿಯಂತೆ ನಡೆಸಲಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.