ಉಡುಪಿ: ಕಳೆದ 24 ಗಂಟೆಯಲ್ಲಿ ಸುರಿದ ಧಾರಾಕಾರ ಮಳೆಗೆ ವ್ಯಾಪಕ ಹಾನಿ ಸಂಭವಿಸಿದ್ದು, ಜಿಲ್ಲೆಯಲ್ಲಿ ಸರಾಸರಿ 68 ಮಿಲಿ ಮೀಟರ್ ಮಳೆ ದಾಖಲಾಗಿದೆ. ಉಡುಪಿ 52.3, ಕುಂದಾಪುರ 71, ಕಾರ್ಕಳದಲ್ಲಿ 73.5 ಮಿಮೀ ಮಳೆ ಬಿದ್ದಿದೆ.
ಬ್ರಹ್ಮಾವರ ತಾಲೂಕಿನಲ್ಲಿ ಅಪಾರ ಕೃಷಿ ಹಾನಿ ಸಂಭವಿಸಿದ್ದು, ಹಿಲಿಯಾಣ ಗ್ರಾಮದಲ್ಲಿ ಅಡಿಕೆ ಬೆಳೆ ನೆಲಕಚ್ಚಿದೆ. ಪ್ರಮೋದ್ ಶೆಟ್ಟಿ, ಅಕ್ಕಮ್ಮ ಪೂಜಾರ್ತಿ, ವಿಶ್ವನಾಥ್, ಜಲಜಾಕ್ಷಿ ಶೆಡ್ತಿ ಅವರ ತೋಟ ಸೇರಿ ಒಟ್ಟು ಅಂದಾಜು ₹ 2.35 ಲಕ್ಷ ನಷ್ಟ ಸಂಭವಿಸಿರುವ ಸಾಧ್ಯತೆ ಇದೆ. ಹಾಗೆಯೇ ಬೈಂದೂರಿನ ಪ್ರದೀಪ್ ಭಟ್ ಅವರ ತೋಟ ನೀರು ಪಾಲಾಗಿದ್ದು, ಅಂದಾಜು ₹ 50 ಸಾವಿರ ನಷ್ಟವಾಗಿದೆ ಎನ್ನಲಾಗುತ್ತಿದೆ.
ಜಿಲ್ಲೆಯಲ್ಲಿ 23 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಬೈಂದೂರು ತಾಲೂಕೊಂದರಲ್ಲೇ 12 ಮನೆಗಳಿಗೆ ಹಾನಿ ಸಂಭವಿಸಿದೆ. ಈ ಮನೆಗಳ ಹಾನಿಗೆ ಅಂದಾಜು ₹10.72 ಲಕ್ಷ, ಉಳಿದ 11 ಮನೆಗಳ ಹಾನಿಗೆ ಅಂದಾಜು ₹ 2.96 ಲಕ್ಷ ನಷ್ಟ ಸಂಭವಿಸಿದೆ. ದನದ ಕೊಟ್ಟಿಗೆಯೊಂದು ಸಂಪೂರ್ಣ ಹಾನಿಗೊಂಡಿದ್ದು, ₹ 20 ಸಾವಿರ ನಷ್ಟ ಸಂಭವಿಸಿರುವ ಸಾಧ್ಯತೆ ಇದೆ.