ಉಡುಪಿ: ದುಬೈನಿಂದ ಬಂದಿದ್ದ ಓರ್ವನನ್ನು ಚಿಕಿತ್ಸೆಗೆ ಒಳಪಡಿಸಿದಾಗ ಪ್ರಾಥಮಿಕ ಮಾಹಿತಿಯಲ್ಲಿ ಕೊರೊನಾ ಪಾಸಿಟಿವ್ ಇರುವುದು ಗೊತ್ತಾಗಿದೆ. ಅದು ದೃಢವಾದರೆ ಆತನನ್ನು ಕೆಎಂಸಿಗೆ ಶಿಫ್ಟ್ ಮಾಡುವುದಾಗಿ ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಪ್ರಾಥಮಿಕ ಮಾಹಿತಿಯಲ್ಲಿ ಕೊರೊನಾ ಇರುವುದು ತಿಳಿದುಬಂದಿದೆ. ವೈದ್ಯಕೀಯ ವರದಿ ಇನ್ನೂ ನನ್ನ ಕೈಗೆ ತಲುಪಿಲ್ಲ. ರಾಜ್ಯದ ನೋಡಲ್ ಅಧಿಕಾರಿಯೊಂದಿಗೆ ಮಾತನಾಡಿದ್ದೇನೆ. ಡಾಕ್ಟರ್ ಅರುಂಧತಿ ಚಂದ್ರಶೇಖರ್ ಜೊತೆಯೂ ಸಂಪರ್ಕದಲ್ಲಿದ್ದೇನೆ. ಆ ವ್ಯಕ್ತಿಯ ಚಲನವಲನಗಳನ್ನು ಟ್ರ್ಯಾಕ್ ಮಾಡುತ್ತಿದ್ದೇವೆ. ಆತ ಬಂದ ವಿಮಾನದ ಬಗ್ಗೆ ಕೂಡ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಜೊತೆ ಸಂಪರ್ಕದಲ್ಲಿದ್ದೇನೆ. ಸೋಂಕಿತ ವ್ಯಕ್ತಿ ಮಣಿಪಾಲ ಕೆಎಂಸಿಯ ಸಿಬ್ಬಂದಿ ಎಂದು ತಿಳಿದು ಬಂದಿದೆ. ದುಬೈನಿಂದ ಬಂದ ಬಳಿಕ ಆತ ಕೆಲಸಕ್ಕೆ ಹೋಗಿಲ್ಲ. ಮಡದಿ ಮತ್ತು ಮಗುವಿನ ಜೊತೆ ಕೂಡ ಸಂಪರ್ಕದಲ್ಲಿ ಇರಲಿಲ್ಲ. ಮನೆಯಿಂದ ಜಿಲ್ಲಾಸ್ಪತ್ರೆಗೆ ಒಬ್ಬನೇ ಕಾರಿನಲ್ಲಿ ಬಂದಿದ್ದಾನೆ. ವೈದ್ಯಕೀಯ ವರದಿಯಲ್ಲಿ ಕೊರೊನಾ ದೃಢವಾದರೆ ರೋಗಿಯನ್ನು ಕೆಎಂಸಿಗೆ ಶಿಫ್ಟ್ ಮಾಡಲು ತಯಾರಿ ನಡೆಸಿದ್ದೇವೆ. ಇನ್ನೂ ಹತ್ತು ಜನರಿಗೆ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಡಿಸಿ ಜಿ.ಜಗದೀಶ್ ತಿಳಿಸಿದರು.