ಉಡುಪಿ: 5 ತಲೆಮಾರುಗಳನ್ನು ಕಂಡ 102 ವಯಸ್ಸಿನ ಉಡುಪಿಯ ಬ್ರಹ್ಮಾವರ ತಾಲೂಕಿನ ನೈಲಾಡಿ ಸಂಪಿಕಟ್ಟೆ ಮನೆಯ ಸಂಕಿಯಜ್ಜಿ ಮಂಗಳವಾರ ಕೊನೆಯುಸಿರೆಳೆದರು. ಇವರಿಗೆ 8 ಮಂದಿ ಮಕ್ಕಳು, ನಾಲ್ವರು ಅಳಿಯಂದಿರು, ಮೂವರು ಸೊಸೆಯಂದಿರು, 33 ಮಂದಿ ಮೊಮ್ಮಕ್ಕಳು, 20 ಮರಿಮಕ್ಕಳು ಹಾಗು ಓರ್ವ ಮರಿ ಮಗಳು ಸಹಿತ ಅಪಾರ ಬಂಧು ಬಳಗವಿದೆ. ಅಜ್ಜಿಯ ‘ಹಳಿ ಹಂಬ್ಲ್’ (ಹಳೆಯ ನೆನಪು) ಎಂಬ ಕುಂದಾಪುರ ಕನ್ನಡದ ಸಂದರ್ಶನ ಭೂಮಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರಲ್ಲಿ ಸಂಕಿಯಜ್ಜಿ ತಮ್ಮ ಹಳೆಯ ಜೀವನಶೈಲಿಯ ನೆನಪುಗಳನ್ನು ಯಾವುದೇ ಮರೆವಿಲ್ಲದೆ ತೆರೆದಿಟ್ಟಿದ್ದರು. ಮುಪ್ಪಿನಲ್ಲೂ ಹಳೆ ನೆನಪುಗಳನ್ನು ಮೆಲುಕು ಹಾಕುತ್ತಿದ್ದ ಅಜ್ಜಿಗೆ ಅಪಾರ ನೆನಪಿನ ಶಕ್ತಿ ಇತ್ತು ಎಂದು ಪರಿಚಯಸ್ಥರು ಹೇಳುತ್ತಾರೆ.
ಮಲ್ಪೆ ಸೇಂಟ್ ಮೇರಿಸ್ ದ್ವೀಪದ ಅವ್ಯವಸ್ಥೆಗೆ ಆಕ್ರೋಶ: ಉಡುಪಿಯ ಸೈಂಟ್ ಮೇರಿಸ್ ದ್ವೀಪದ ಅವ್ಯವಸ್ಥೆಯ ವಿರುದ್ಧ ಆಕ್ರೋಶ ಹೊರಹಾಕಿದ ಪ್ರವಾಸಿಗನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಿದೆ. ಈ ವಿಡಿಯೋದಲ್ಲಿರುವಂತೆ, ದ್ವೀಪಕ್ಕೆ ಬಂದ ಪ್ರವಾಸಿಗರ ಮೇಲೆ ಅಲ್ಲಿನ ನಿರ್ವಹಣಾ ಸಿಬ್ಬಂದಿ ದರ್ಪ ತೋರಿದ್ದಾರೆ. ದ್ವೀಪದೊಳಗಡೆ ಕ್ಯಾಮರಾ ನಿಷೇಧಿಸಿದ್ದು, ಶುಲ್ಕ ಪಾವತಿಸಿ ಲಗೇಜು ರೂಮ್‌ನಲ್ಲಿ ಕ್ಯಾಮರಾ ಇಡಬಹುದು. ಆದರೆ ಸೇಫ್ ಆಗಿಡಲು ಸರಿಯಾದ ವ್ಯವಸ್ಥೆ ಇಲ್ಲ. ಬಾಗಿಲುಗಳಿಲ್ಲದ ಕೊಠಡಿಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಕ್ಯಾಮರಾ ಇಡುವ ಬಗ್ಗೆ ಪ್ರಶ್ನಿಸಿದ ಪ್ರವಾಸಿಗನಿಗೆ ಕ್ಯಾಮರಾವನ್ನೇ ತೆಗೆದು ಬಿಸಾಡುತ್ತೇನೆ ಎಂದು ಸಿಬ್ಬಂದಿ ಗದರಿದ್ದಾರೆ. ಬರುವ ಪ್ರವಾಸಿಗರನ್ನು ಸಿಬ್ಬಂದಿ ಏಕವಚನದಲ್ಲೇ ಮಾತಾಡಿಸುವ, ಪ್ರವಾಸಿಗ ಹಾಗೂ ಸಿಬ್ಬಂದಿಯ ವಾಗ್ವಾದ ವಿಡಿಯೋದಲ್ಲಿದೆ. ಸೀ ವಾಕ್‌ನಲ್ಲಿ ಕ್ಯಾಮರಾ ಪ್ರವೇಶಕ್ಕೆ ಹಣ ಪಾವತಿ ಮಾಡಿದರೂ, ಸೇಂಟ್ ಮೇರಿಸ್ನಲ್ಲಿ ಕ್ಯಾಮರಾಕ್ಕೆ ಅವಕಾಶ ಇಲ್ಲದಾಗಿದೆ. ದ್ವೀಪಕ್ಕೆ ತೆರಳುವ ಬೋಟ್‌ನ ದುಬಾರಿ ದರದ ವಿರುದ್ಧವೂ ಪ್ರವಾಸಿಗರಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ರಹ್ಮಾವರದಲ್ಲಿ ರಸ್ತೆ ಅಪಘಾತ: ಲಾರಿಯೊಂದನ್ನು ಓವರ್‌ಟೇಕ್ ಮಾಡುವ ಸಂದರ್ಭದಲ್ಲಿ ಹಿಂದಿನಿಂದ ಬೈಕ್ ಡಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 66 ಬ್ರಹ್ಮಾವರ ಮಂಜುನಾಥ ಪೆಟ್ರೋಲ್ ಬಂಕ್ ಬಳಿ ಮಂಗಳವಾರ ರಾತ್ರಿ ನಡೆದಿದೆ. ಮೃತ ವಿದ್ಯಾರ್ಥಿಗಳನ್ನು ಸಾಲಿಗ್ರಾಮ ಸಮೀಪದ ಸಮಿತ್ ಕುಮಾರ್ ಎಮ್.ಜಿ (19) ಮತ್ತು ವಾಗೀಶ್ ಕೆದ್ಲಾಯ (19) ಎಂದು ಗುರುತಿಸಲಾಗಿದೆ. ಉಡುಪಿಯ ಖಾಸಗಿ ಸಂಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಮಂಗಳವಾರ ಸಂಜೆ 7.30 ರ ಸುಮಾರಿಗೆ ಉಡುಪಿಯಿಂದ ಕಾಲೇಜು ಮುಗಿಸಿ ಬೈಕಿನಲ್ಲಿ ವಾಪಸಾಗುತ್ತಿದ್ದಾಗ ಟ್ರಕ್‌ವೊಂದನ್ನು ಹಿಂದಿಕ್ಕುವ ಭರದಲ್ಲಿ ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿದೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಲಾರಿ ಬೊಲೆರೋ ಅಪಘಾತ: ಸ್ಥಳದಲ್ಲಿ ಇಬ್ಬರ ಸಾವು