ಉಡುಪಿ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ ರನ್ ವೇಯಿಂದ ಜಾರಿ ಕೆಳಕ್ಕೆ ಬಿದ್ದು, ನೂರಾರು ಸಾವು ನೋವುಗಳು ಸಂಭವಿಸಿದ್ದವು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನತೆಗೆ 2010 ರ ಮೇ. 22 ರ ಬೆಳಗ್ಗೆ ಮರೆಯಲಾಗದ ದಿನವಾಗಿದೆ.
ಅಂದಿನ ದುರಂತದಲ್ಲಿ ಪೈಲಟ್ ಸಿಬ್ಬಂದಿ ಸೇರಿ 158 ಮಂದಿ ಮೃತಪಟ್ಟಿದ್ದರು. ವಿಮಾನದಲ್ಲಿ 135 ಮಂದಿ ವಯಸ್ಕರು, 19 ಮಕ್ಕಳು ಹಾಗೂ 4 ಶಿಶುಗಳು, 6 ಮಂದಿ ಸಿಬ್ಬಂದಿ ಸೇರಿ ಒಟ್ಟು 166 ಮಂದಿ ಪ್ರಯಾಣಿಸುತ್ತಿದ್ದರು. ಆದರೆ ಈ ಅಪಘಾತದಲ್ಲಿ 8 ಮಂದಿ ಬದುಕುಳಿದಿದ್ದಾರೆ. ಮೃತಪಟ್ಟವರಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೇರಳದವರು. ಉಡುಪಿ ಜಿಲ್ಲೆಯ ಶಂಕರಪುರ ಪಾಂಗ್ಳಾ ಒಂದೇ ಕುಟುಂಬದ ಮೂರು ಜನರು ಅಸುನೀಗಿದ್ದರು.
ದುಬೈಯಿಂದ ಬಂದ ವಿಮಾನ ಎಲ್ಲಾ ಸುರಕ್ಷಾ ಸಂಕೇತಗಳ ವಿನಿಮಯದೊಂದಿಗೆ ಇಳಿದಿತ್ತು. ಆದರೆ, ರನ್ ವೇಯಲ್ಲಿ ನಿಲ್ಲದೇ ಮುಂದಕ್ಕೆ ಚಲಿಸುತ್ತಲೇ ಸೂಚನಾ ಗೋಪುರದ ಕಂಬಗಳಿಗೆ ಡಿಕ್ಕಿಯಾಗಿ ಆಳ ಪ್ರದೇಶಕ್ಕೆ ಹೋಗಿ ಬಿದ್ದಿದೆ. ಶಂಕರಪುರದ ನಿವಾಸಿಗಳಾದ ಫ್ಲಾಸಿಯಾ, ಶಕುಂತಲ, ಲೋಬೊ, ವೆನಿಶಾ, ನಿಕೋಲ, ಲೋಬೊ, ವಿಶಾಲ್ ಫ್ಲೊಯ್ಡ್ ಲೋಬೊ ಮೃತಪಟ್ಟ ದುರ್ದೈವಿಗಳು.
ಕರಾವಳಿಯ ಜನತೆ ಎಂದಿಗೂ ಮರೆಯಲಾಗದ ಘಟನೆ ಇದಾಗಿದೆ. ಅಂದು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಕುಟುಂಬಗಳಿಗೆ ದುಃಖವನ್ನು ಸಹಿಸುವ ಶಕ್ತಿ ಆ ದೇವರು ನೀಡಲಿ.