ತುಮಕೂರು: ಸಮ್ಮಿಶ್ರ ಸರ್ಕಾರದ ಪತನದ ಬೆನ್ನಲ್ಲೆ ಅಧಿಕಾರ ಕಳೆದುಕೊಂಡ ಮಾಜಿ ಡಿಸಿಎಂ ಪರಮೇಶ್ವರ್ ಸ್ಥಿತಿಯನ್ನು ಕುಹಕ ಮಾಡುವ ರೀತಿಯಲ್ಲಿ ಕೆ.ಎನ್. ರಾಜಣ್ಣ ಬೆಂಬಲಿಗರು ಪ್ರತಿಭಟನೆ ನಡೆಸಿದರು.
ನಗರದ ಟೌನ್ಹಾಲ್ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, 'ತೊಲಗಿತು ತೊಲಗಿತು ಜೀರೋ ಟ್ರಾಫಿಕ್ ತೊಲಗಿತು', ' ನೆಮ್ಮದಿ ನೆಮ್ಮದಿ ತುಮಕೂರು ಜನತೆಗೆ ನೆಮ್ಮದಿ' ಎಂಬ ಘೋಷಣೆಗಳನ್ನು ಕೂಗಿದರು.
ಡಾ. ಜಿ. ಪರಮೇಶ್ವರ್ ಅವರು ಉಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜೀರೋ ಟ್ರಾಫಿಕ್ ವ್ಯವಸ್ಥೆಯನ್ನು ಬಳಸುತ್ತಿದ್ದ ಕಾರಣ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಹೀಗಾಗಿ ಪ್ರತಿಭಟನಾಕಾರರು ಪರಮೇಶ್ವರ್ ಹೆಸರು ಉಲ್ಲೇಖಿಸದೆ, ಜೀರೋ ಟ್ರಾಫಿಕ್ ಎಂದು ಪರೋಕ್ಷವಾಗಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಮತ್ತೊಂದೆಡೆ ಸಮ್ಮಿಶ್ರ ಸರ್ಕಾರವು ತುಮಕೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅನ್ನು ಸೂಪರ್ ಸೀಡ್ ಮಾಡಿರುವುದಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿರುವುದನ್ನು ಸ್ವಾಗತಿಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.