ತುಮಕೂರು : ಯಡಿಯೂರಪ್ಪ ಬೇರೆಯವರ ರೀತಿ ಪುಕ್ಸಟ್ಟೆ ಮುಖ್ಯಮಂತ್ರಿಯಾಗಿಲ್ಲ ಎಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ತುಮಕೂರಿನ ಸಿದ್ದಗಂಗಾ ಮಠದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿರಲಿಲ್ಲ, ಹಾಗಾಗಿ ಇಂದು ಭೇಟಿ ನೀಡಿದ್ದೇನೆ ಎಂದ್ರು.
ಸರ್ಕಾರದ ಯಾವುದೇ ಕೆಲಸಗಳಲ್ಲಿ ನಾನು ಹಸ್ತಕ್ಷೇಪ ಮಾಡಿಲ್ಲ ಎಂದು ಇದೇ ವೇಳೆ ಅವರು ತನ್ನ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಸ್ಪಷ್ಟನೆ ಕೊಟ್ಟರು.
ನೆರೆ ಪರಿಹಾರಕ್ಕೆ ಸಂಬಂಧಪಟ್ಟಂತೆ ಕೇಂದ್ರದಿಂದ ಪರಿಹಾರ ಬರುವುದು ವಿಳಂಬವಾಗಿರುವುದು ಸತ್ಯ. ಕೇಂದ್ರ ಬೇರೆ ರಾಜ್ಯದ ನೆರೆ ಪೀಡಿತ ಪ್ರದೇಶಗಳಿಗೂ ಪರಿಹಾರ ಕೊಟ್ಟಿಲ್ಲ ಎಂದರು. ಕೇಂದ್ರದಿಂದ ಪರಿಹಾರ ಹಣ ಬಂದಿಲ್ಲ ಎಂದು ಯಾವುದೇ ಕೆಲಸಗಳು ಸ್ಥಗಿತಗೊಂಡಿಲ್ಲ. ರಾಜ್ಯ ಸರ್ಕಾರದಿಂದ 1,500 ಕೋಟಿ ರೂ ಈಗಾಗಲೇ ನೆರೆ ಪರಿಹಾರಕ್ಕೆ ಬಿಡುಗಡೆ ಮಾಡಲಾಗಿದೆ ಎಂದರು.
ಬಿಬಿಎಂಪಿ ಮಹಾಪೌರರ ಆಯ್ಕೆ ಬಗ್ಗೆ ಮುಖ್ಯಮಂತ್ರಿಗಳ ಬಳಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತುಕತೆ ನಡೆಸಿದ್ದರು. ಈ ವಿಷಯದಲ್ಲಿ ಮುಖ್ಯಮಂತ್ರಿಗಳನ್ನು ಕಡೆಗಣಿಸಿದ್ದಾರೆ ಎಂಬುದು ಸತ್ಯಕ್ಕೆ ದೂರವಾದದ್ದು ಎಂದು ಹೇಳಿದ್ರು.
ಅನರ್ಹ ಶಾಸಕರು ಯಾರೂ ಕೂಡ ಅಧಿಕೃತವಾಗಿ ಬಿಜೆಪಿ ಪಕ್ಷ ಸೇರಿಲ್ಲ.ಅನರ್ಹ ಶಾಸಕರು ಬಿಜೆಪಿ ಪಕ್ಷ ಸೇರಲಿದ್ದಾರೆ ಎಂಬ ಪರಿಸ್ಥಿತಿ ನಿರ್ಮಾಣವಾದಾಗ ಮುಖ್ಯಮಂತ್ರಿಗಳು ಹಾಗೂ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅವರು ತಿಳಿಸಿದ್ರು.