ತುಮಕೂರು/ಕಾರವಾರ/ಹಾಸನ/ಹಾವೇರಿ: ವಿಶ್ವ ಮಲೇರಿಯಾ ದಿನದ ಅಂಗವಾಗಿ ವಿವಿಧ ಜಿಲ್ಲೆಗಳಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ವಿಶ್ವ ಮಲೇರಿಯಾ ದಿನಾಚರಣೆ ಅಂಗವಾಗಿ ತುಮಕೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಟಿ ಹಮ್ಮಿಕೊಳ್ಳಲಾಗಿತ್ತು.ಈ ವೇಳೆ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಪುರುಷೋತ್ತಮ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಲೇರಿಯಂತಹ ಕಾಯಿಲೆಗಳು ವಿದೇಶದಲ್ಲಿ ನಿಯಂತ್ರಣಗೊಂಡಷ್ಟು ಭಾರತದಲ್ಲಿ ನಿಯಂತ್ರಣವಾಗುತ್ತಿಲ್ಲ. ವಿದೇಶದಲ್ಲಿರುವವರ ಇಚ್ಛಾಶಕ್ತಿ, ಸಾರ್ವಜನಿಕರೊಂದಿಗಿನ ಹೊಂದಾಣಿಕೆ ಹಾಗೂ ಪರಿಸರ ನೈರ್ಮಲ್ಯಕ್ಕೆ ಕೊಟ್ಟ ಆಧ್ಯತೆಯನ್ನು ನಮ್ಮ ದೇಶದಲ್ಲಿ ನೀಡಲು ಆಗುತ್ತಿಲ್ಲವೆಂದು ವಿಷಾದ ವ್ಯಕ್ತಪಡಿಸಿದರು.
ಮಲೇರಿಯಾದಂತಹ ಮಾರಕ ರೋಗಕ್ಕೆ ಪ್ರಪಂಚದಾದ್ಯಂತ ಒಂದು ವರ್ಷದಲ್ಲಿ 10 ಲಕ್ಷ ಜನ ಸಾವನ್ನಪ್ಪುತ್ತಿದ್ದಾರೆ. ರಾಜ್ಯದಲ್ಲಿ ಮಲೇರಿಯಾ ರೋಗವನ್ನು 2025ಕ್ಕೆ ನಿವಾರಣೆ ಮಾಡುವ ಗುರಿ ಹೊಂದಲಾಗಿದ್ದು, ಈ ಗುರಿಯನ್ನು ಹಂತ-ಹಂತವಾಗಿ ಸಾಧಿಸಲು ಯೋಜಿಸಲಾಗಿದೆ. ಜಿಲ್ಲೆಯಲ್ಲಿ 2020ಕ್ಕೆ ಈ ರೋಗವನ್ನು ನಿರ್ಮೂಲನೆ ಮಾಡುವ ಯೋಜನೆ ಇದೆ ಎಂದರು.
![World malaria day](https://etvbharatimages.akamaized.net/etvbharat/images/3109269_thsf.jpg)
ಬಳಿಕ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಚಂದ್ರಿಕಾ ಮಾತನಾಡಿ ಜಿಲ್ಲೆಯಲ್ಲಿ 2011ರಲ್ಲಿ ಒಟ್ಟು 566 ಪ್ರಕರಣಗಳು ವರದಿಯಾಗಿದ್ದವು. 2018ರಲ್ಲಿ 103 ಪ್ರಕರಣಗಳಲ್ಲಿ ಶೇಕಡ 54 ರಷ್ಟು ಪ್ರಕರಣಗಳು ಜಿಲ್ಲೆಗೆ ವಲಸೆ ಬಂದಿರುವ ಜನರಲ್ಲಿ ಪತ್ತೆಯಾಗಿದ್ದು, 2019 ಮಾರ್ಚ್ ಅಂತ್ಯದವರೆಗೆ 15 ಪ್ರಕರಣಗಳು ವರದಿಯಾಗಿವೆ. ಪ್ರತಿ ತಿಂಗಳಿಗೆ ಎರಡು ಬಾರಿ ಲಾರ್ವಾ ಸರ್ವೆ ಮಾಡಲಾಗುತ್ತಿದ್ದು, ಜಿಲ್ಲೆಯಲ್ಲಿನ ಹೆಚ್ಎಎಲ್, ಸೋಲಾರ್ ಪಾರ್ಕ್, ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಹೊರ ರಾಜ್ಯಗಳಿಂದ ಬಂದಿರುವ ಕಾರ್ಮಿಕರಿಂದ ಮಲೇರಿಯಾ ರೋಗ ಹೆಚ್ಚಾಗುತ್ತದೆ. ಹಾಗಾಗಿ ಅವರನ್ನು ಗಮನದಲ್ಲಿ ಇಟ್ಟುಕೊಂಡು ನಿರ್ದಿಷ್ಟ ಚಿಕಿತ್ಸೆಯನ್ನು ರೋಗಿಗಳು ಪಡೆದುಕೊಳ್ಳಲು ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದೆ. ಆ ನಿಟ್ಟಿನಲ್ಲಿ ನಮ್ಮ ತಂಡ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಕಾರವಾರ ಮತ್ತು ಹಾಸನದಲ್ಲೂ ವಿಶ್ವ ಮಲೇರಿಯಾ ದಿನಾಚರಣೆ :
ಹಾಸನದಲ್ಲಿ 2019 ರ ಮಾರ್ಚ್ ವರೆಗಿನ ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ 7 ಮಲೇರಿಯಾ ಪ್ರಕರಣಗಳು ಪತ್ತೆಯಾಗಿದ್ದು, ಇವುಗಳಲ್ಲಿ ಮಂಗಳೂರಿನ ವಿದ್ಯಾರ್ಥಿಗಳು ಹಾಗೂ ವಾಹನ ಚಾಲಕರಲ್ಲಿ ಈ ರೋಗದ ಲಕ್ಷಣಗಳು ಕಂಡು ಬಂದಿವೆ ಎಂದು ಮಲೇರಿಯಾ ಸರ್ವೇಕ್ಷಣಾ ಅಧಿಕಾರಿ ಡಾ. ರಾಜ್‌ಗೋಪಾಲ್ ಹೇಳಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಶ್ವ ಮಲೇರಿಯಾ ದಿನಾಚರಣೆ ಹಿನ್ನಲೆ ‘ಶೂನ್ಯ ಮಲೇರಿಯಾ ನನ್ನಿಂದಲೇ ಪ್ರಾರಂಭ’ ಎಂಬ ಘೋಷ ವಾಕ್ಯದೊಂದಿಗೆ ಮಲೇರಿಯಾ ನಿಯಂತ್ರಣದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಮಲೇರಿಯಾ ಪ್ರಮಾಣ ಕಡಿಮೆಯಾಗುತ್ತಿದೆ. 2017ರಲ್ಲಿ 7381 ಇದ್ದ ಪ್ರಕರಣಗಳ ಸಂಖ್ಯೆ 2018ಕ್ಕೆ 5289ಕ್ಕೆ ಇಳಿಕೆಯಾಗಿದೆ. ಅಲ್ಲದೆ ಮಲೇರಿಯಾವನ್ನು ಎಲ್ಲರೂ ಕೈ ಜೋಡಿಸಿ ಜಾಗೃತಿ ವಹಿಸಿದ್ದಲ್ಲಿ ಸಂಪೂರ್ಣ ನಿರ್ಮೂಲನೆ ಮಾಡಲು ಸಾಧ್ಯವಿದೆ ಎಂದು ಮಾಹಿತಿ ನೀಡಿದರು.
ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲೂ ಮಲೇರಿಯಾ ದಿನಾಚರಣೆ ಕುರಿತು ಅಲ್ಲಿನ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದರು.