ತುಮಕೂರು: ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಗಂಡನ ನಿಧನ ಬಳಿಕ ಅತ್ತೆ-ಮಾವ ನನ್ನನ್ನು ಮನೆಯೊಳಗೆ ಬಿಡುತ್ತಿಲ್ಲ ಎಂಬ ಆರೋಪವನ್ನು ನೊಂದ ಮಹಿಳೆಯೊಬ್ಬರು ಮಾಡುತ್ತಿದ್ದಾರೆ.
'ಪತಿ ನಿಧನ ಹೊಂದಿದ ಬಳಿಕ ಅತ್ತೆ-ಮಾವ ನನ್ನನ್ನು ಮನೆಗೆ ಸೇರಿಸುತ್ತಿಲ್ಲ. ಅಷ್ಟೇ ಅಲ್ಲ ನನಗೆ ನಿರಂತರವಾಗಿ ಕಿರುಕುಳ ನೀಡಿದ್ದಾರೆ' ಎಂದು ಆರೋಪಿಸಿ ವಿದ್ಯಾನಗರದ ನಿವಾಸಿ ಶ್ರೀಶೈಲ ಆಗ್ರೋ ಇಂಡಸ್ಟ್ರೀಸ್ನ ಮಾಲೀಕರಾದ ಕೃಷ್ಣಪ್ಪನವರ ಮನೆಯ ಮುಂದೆ ಸೊಸೆ ಮಂಜುಳಾ ಪ್ರತಿಭಟನೆ ನಡೆಸಿದರು.
13 ಸೆಪ್ಟೆಂಬರ್ 2019ರಂದು ಶ್ರೀಶೈಲ ಆಗ್ರೋ ಇಂಡಸ್ಟ್ರೀಸ್ನ ಮಾಲೀಕರ ಮಗನಾದ ಜಿತೇಂದ್ರ ಕುಮಾರ್ ಅವರು ಮಂಜುಳಾರನ್ನು ಪ್ರೀತಿಸಿ ಮದುವೆಯಾಗಿದ್ದರು ಎನ್ನಲಾಗ್ತಿದೆ. ಜಿತೇಂದ್ರ ಕುಮಾರ್ ಹಾಗೂ ಮಂಜುಳಾ ಅವರು ಬೇರೆ ಬೇರೆ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಜಿತೇಂದ್ರ ಕುಮಾರ್ ಕುಟುಂಬದವರು ಜಾತಿ ಕಾರಣ ನೀಡಿ ಮದುವೆಗೆ ವಿರೋಧಿಸಿದ್ದರು. ನಂತರದ ದಿನದಲ್ಲಿ ಎಲ್ಲರೂ ಸರಿಯಾಗಿ ಹೊಂದಿಕೊಂಡು ಜೀವನ ಸಾಗಿಸುತ್ತಿದ್ದರು ಎನ್ನಲಾಗ್ತಿದೆ.
ಜಿತೇಂದ್ರ ಕುಮಾರ್ ಮತ್ತು ಮಂಜುಳಾ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ನಲ್ಲಿ ಮನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. 4 ತಿಂಗಳ ಹಿಂದೆ ಜಿತೇಂದ್ರ ಕುಮಾರ್ ಜಾಂಡಿಸ್ ಕಾಯಿಲೆಯಿಂದ ನಿಧನ ಹೊಂದಿದ್ದಾರೆ. ನಂತರದ ದಿನದಲ್ಲಿ ಗಂಡನನ್ನು ಕಳೆದುಕೊಂಡ ಮಂಜುಳಾ ಮಾವನ ಮನೆಗೆ ತೆರಳಿದ್ದಾರೆ.
ಆದ್ರೆ ಮಾವನ ಮನೆಯವರು ತನ್ನನ್ನು ಮನೆಯಿಂದ ಹೊರಹಾಕಿದರು ಎಂದು ಮಂಜುಳಾ ಆರೋಪಿಸಿದ್ದಾರೆ. ನನ್ನನ್ನು ಮನೆಗೆ ಸೇರಿಸುತ್ತಿಲ್ಲ. ನನಗೆ ಹೆಣ್ಣು ಮಗು ಇದ್ದು, ನಾವಿಬ್ಬರು ಬೀದಿ ಪಾಲಾಗಿದ್ದೇವೆ ಅಂತಾ ಮಂಜುಳಾ ಆರೋಪಿಸುತ್ತಾರೆ. ಈಗ ಮಂಜುಳಾ ತಮ್ಮ ಗಂಡನ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದು, ಮಹಿಳೆಗೆ ಸ್ಥಳೀಯ ದಲಿತ ಸಂಘಟನೆಗಳು ಬೆಂಬಲ ನೀಡಿವೆ.
ಓದಿ: 6 ತಿಂಗಳು ನಾಪತ್ತೆ ಬಳಿಕ ಮಹಿಳೆ ದಿಢೀರ್ ಪ್ರತ್ಯಕ್ಷ.. ಕೊಲೆ ಕೇಸಲ್ಲಿ ಜೈಲು ಪಾಲಾಗಿದ್ದ ಗಂಡ!