ತುಮಕೂರು: ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ಇದುವರೆಗೂ ಕೊರೊನಾದಿಂದ ಗುಣಮುಖರಾದವರಿಗೆ ಹೂ ಗುಚ್ಛ ಕೊಟ್ಟು ಬೀಳ್ಕೊಡುಗೆ ನೀಡಲಾಗುತ್ತಿತ್ತು. ಆದರೆ, ಸೋಂಕಿತರೊಬ್ಬರು ಸಂಪೂರ್ಣ ಗುಣಮುಖರಾಗಿ ಮನೆಗೆ ಹೋಗುವ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿ ಹಾಗೂ ವೈದ್ಯರಿಗೆ ಹೂವಿನ ಹಾರ ಹಾಕಿ ಸನ್ಮಾನ ಮಾಡಿ ಮನೆಗೆ ಹೋದ ಘಟನೆ ನಡೆದಿದೆ.
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಕಲಾವತಿ ಎಂಬುವವರು, ಕೊರೊನಾ ರೋಗಿಗಳನ್ನು ಉಪಚರಿಸುತ್ತಿದ್ದ ವೇಳೆ ಸೋಂಕು ತಗಲಿತ್ತು. ಹೀಗಾಗಿ ಕಲಾವತಿಯವರಿಗೆ ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಯಿತು. ಈಗ ಸಂಪೂರ್ಣ ಗುಣಮುಖರಾಗಿ ಹೊರಬಂದಿರುವ ಕಲಾವತಿ, ಜಿಲ್ಲಾಸ್ಪತ್ರೆಯ ಸಿಬ್ಬಂದಿ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯ ಅವರಿಗೆ ಸನ್ಮಾನ ಮಾಡಿದ್ದು ಗಮನಾರ್ಹವಾಗಿತ್ತು.
ಸ್ಟಾಫ್ ನರ್ಸ್ ಆಗಿ ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಕಲಾವತಿ ಅವರಿಗೂ ಸೋಂಕು ತಗುಲಿದ್ದ ವಿಷಯ ತಿಳಿದು ನೆರೆ ಹೊರೆಯವರು ಅನುಮಾನದಿಂದಲೇ ಕುಟುಂಬಸ್ಥರನ್ನು ಕಂಡಿದ್ದು, ತೀವ್ರ ನಿರಾಸೆ ಉಂಟು ಮಾಡಿದೆ.
ಹೀಗಾಗಿ ತೀವ್ರ ನೊಂದುಕೊಂಡಿದ್ದ ಕುಟುಂಬದವರು ಕಲಾವತಿ ಅವರು ಗುಣಮುಖರಾಗಿ ಮನೆಗೆ ಬರುತ್ತಿದ್ದಂತೆ ಸಂತಸದಿಂದ ಬಡಾವಣೆಯಲ್ಲಿ ಅವರನ್ನು ಸ್ವಾಗತಿಸಿದರು. ಅಲ್ಲದೇ ಕೊರೊನಾ ರೋಗ ಪೀಡಿತರನ್ನು ತಾತ್ಸಾರ ಭಾವನೆಯಿಂದ ಸಾರ್ವಜನಿಕರು ಕಾಣಬಾರದು. ಪ್ರತಿಯೊಬ್ಬರಿಗೂ ಸೋಂಕು ಹರಡುವ ಸಾಧ್ಯತೆಗಳು ಇರುತ್ತದೆ. ಹೀಗಾಗಿ ಸಾರ್ವಜನಿಕರು ಕೂಡ ರೋಗ ಪೀಡಿತರನ್ನು ವಿಶ್ವಾಸದಿಂದ ನೋಡಿ. ಅಲ್ಲದೇ ರೋಗ ಲಕ್ಷಣಗಳು ಕಂಡು ಬಂದ ತಕ್ಷಣ ಜಿಲ್ಲಾಸ್ಪತ್ರೆಗೆ ಬಂದು ಪರೀಕ್ಷಿಸಿಕೊಳ್ಳಿ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯ ಕರೆ ನೀಡಿದ್ದಾರೆ.