ಶಿವಮೊಗ್ಗ : ನಟ ಸುದೀಪ್ ಬಿಜೆಪಿ ಪರ ಪ್ರಚಾರ ಮಾಡಲು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದೆಡೆ ಪ್ರಚಾರಕ್ಕೆ ಹೋಗುವುದಾಗಿ ಹೇಳಿದ್ದಕ್ಕೆ ಕಾಂಗ್ರೆಸ್‌ನವರು ವಿರೋಧಿಸುವುದೇಕೆ ಎಂದು ಮೊದಲು ತಿಳಿಸಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ಆಮ್ ಆದ್ಮಿ ಪಕ್ಷದ ಏಳುಮಲೈ ಹಾಗೂ ಜೆಡಿಎಸ್‌ನ ಗೌರಿ ಶ್ರೀನಾಥ್ ತಮ್ಮ ಬೆಂಬಲಿಗರೂಂದಿಗೆ ಬಿಜೆಪಿ ಸೇರಿದ್ದು, ಈ ಸಂದರ್ಭದಲ್ಲಿ ಮಾತನಾಡಿದ ಈಶ್ವರಪ್ಪ, ಸುದೀಪ್ ಇದೇ ಬೆಂಬಲವನ್ನು ಕಾಂಗ್ರೆಸ್‌ಗೆ ಕೊಟ್ಟಿದ್ದರೆ ಹೀಗೆ ವಿರೋಧ ಮಾಡುತ್ತಿದ್ದರೇ?. ಕಾಂಗ್ರೆಸ್‌ನವರು ಎಲ್ಲದಕ್ಕೂ ಟೀಕೆ ಮಾಡ್ತಾರೆ ಎಂದು ಹೇಳಿದರು. ರಾಜ್ಯದ ಮುಖ್ಯಮಂತ್ರಿಗಳ ಅಭಿವೃದ್ದಿ ಕೆಲಸ, ರಾಷ್ಟ್ರ ನಾಯಕ ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರ್ಯ ಹಾಗು ಬಿಜೆಪಿ ಸಿದ್ದಾಂತ ಮೆಚ್ಚಿ ಸುದೀಪ್ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಮುಂದಾಗಿದ್ದಾರೆ ಎಂದರು.
ರಾಜ್ಯದ 224 ಕ್ಷೇತ್ರದಲ್ಲೂ ಬಿಜೆಪಿಯ ಪ್ರಮುಖ ಕಾರ್ಯಕರ್ತರು ತಮ್ಮ ನಾಯಕನನ್ನು ಆಯ್ಕೆ ಮಾಡಲು ಆಂತರಿಕ ಚುನಾವಣೆ ನಡೆದಿದೆ. ಅದರಲ್ಲಿ ನಮ್ಮ ಕಾರ್ಯಕರ್ತರು ಸಹ ನನ್ನ ಹೆಸರನ್ನು ಕಳುಹಿಸಿದ್ದಾರೆ. ಚುನಾವಣೆಯಲ್ಲಿ ಯಾರೆ ಸ್ಪರ್ಧೆ ಮಾಡಲಿ, ಚುನಾವಣೆ ಫ್ರೆಂಡ್ಲಿ ಫೈಟ್ ಆಗಬೇಕು. ಏಕೆಂದರೆ ಚುನಾವಣೆ ಕೇವಲ ಒಂದೂವರೆ ತಿಂಗಳಷ್ಟೇ, ಬಳಿಕ ಎಲ್ಲ ಪಕ್ಷದವರೂ ಸಮಾಜ ಸೇವೆ ಮಾಡಬೇಕಿದೆ ಎಂದರು.
ಸಿದ್ದರಾಮಯ್ಯ ಅಲೆಮಾರಿ ರಾಜಕಾರಣಿ: ಸಿದ್ದರಾಮಯ್ಯನ ಬಗ್ಗೆ ನಾನೇನು ಉತ್ತರ ಕೊಡಲಿ?. ಈ ಹಿಂದೆ ಕ್ಷೇತ್ರ ಹುಡುಕಾಟದ ಸಂದರ್ಭದಲ್ಲಿ ಅಲೆಮಾರಿಯಾಗಿದ್ದರು. ಅವರು ಮೊದಲು ಹೈಕಮಾಂಡ್ ತೀರ್ಮಾನ ಮಾಡಲಿ ಎಂದರೂ, ನಂತರ ಹೆಂಡ್ತಿ ಮಗನನ್ನು ಕೇಳುತ್ತೇನೆ ಎಂದರು. ಸಿದ್ದರಾಮಯ್ಯ ದಲಿತರು, ಒಕ್ಕಲಿಗರು, ಒಬಿಸಿಯವರಿಗೆ ಮೋಸ ಮಾಡಿದ್ದಾರೆ ಎಂದು ಕಿಡಿಕಾರಿದರು.
ಚುನಾವಣೆ ಹೊಸ್ತಿನಲ್ಲಿ ಕಾಂಗ್ರೆಸ್‌ನ ಕೆಲವು ಪ್ರಭಾವಿ ನಾಯಕರು ನಾನೇ ಸಿಎಂ ಎಂದು ಹೇಳುತ್ತಿದ್ದು, ಸಿದ್ದರಾಮಯ್ಯ ಮೊದಲ ಸ್ಥಾನದಲ್ಲಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಕೆ.ಎಸ್.ಈಶ್ವರಪ್ಪ, ನೀವೇ ಸಿಎಂ ಅಂತ ಘೋಷಣೆ ಮಾಡಿದವರು ಯಾರು?. ನೀವು ಮೊದಲೇ ಗೆಲ್ಲಲ್ಲ, ಇದರಿಂದ ಸಿಎಂ ಆಗುವ ಮಾತು ಎಲ್ಲಿ ಬಂತು.? ಸಿದ್ದರಾಮಯ್ಯ ಮತ್ತು ಡಿಕೆಶಿ ನಾವು ಸಿಎಂ ಎಂದು ಹೇಳಲು ಅವರಿಗೆ ಅಧಿಕಾರ ಕೊಟ್ಟವರು ಯಾರು? ಎಂದರು.
ಮಾರ್ಚ್ 9 ರಂದು ಬಿಜೆಪಿಯ ಪಟ್ಟಿ ಬಿಡುಗಡೆ: ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕುರಿತು ನಿನ್ನೆ ಬೆಂಗಳೂರಿನಲ್ಲಿ ಸಭೆ ನಡೆಸಲಾಗಿದೆ. 224 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿಯನ್ನು ಒಂದು ಕ್ಷೇತ್ರಕ್ಕೆ 3-4 ಜನರಂತೆ ಮಾಡಲಾಗಿದೆ. ಈ ಪಟ್ಟಿ ನಾಳೆ ಅಥವಾ ನಾಡಿದ್ದು ದೆಹಲಿಗೆ ತೆರಳಲಿದ್ದು, ಅಲ್ಲಿ ಪಕ್ಷದ ನಾಯಕರುಗಳು 9 ರಂದು ಅಭ್ಯರ್ಥಿಗಳನ್ನು ಘೋಷಣೆ ಮಾಡಲಿದ್ದಾರೆ. ಅಂದೇ ರಾಜ್ಯದಲ್ಲಿ ನಮ್ಮ ನಾಯಕರು ಸಹಾ ಘೋಷಣೆ ಮಾಡಲಿದ್ದಾರೆ ಎಂದು ಈಶ್ವರಪ್ಪ ತಿಳಿಸಿದರು. ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಎಂಎಲ್ಸಿ ರುದ್ರೇಗೌಡ ಸೇರಿದಂತೆ ಅನೇಕರು ಈ ವೇಳೆ ಉಪಸ್ಥಿತರಿದ್ದರು.
ಇದನ್ನೂ ಓದಿ : ನಟ ಕಿಚ್ಚ ಸುದೀಪ್ ಚಿತ್ರ, ಟಿವಿ ಶೋ ಪ್ರಸಾರ ನಿಲ್ಲಿಸಿ: ಚುನಾವಣಾ ಆಯೋಗಕ್ಕೆ ಪತ್ರ ಬರೆದ ವಕೀಲ ಶ್ರೀಪಾಲ್