ತುಮಕೂರು: ತುಮಕೂರಿನಲ್ಲಿ ವಾಸವಿದ್ದ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿ ಹೃದಯಾಘಾದಿಂದ ಸಾವನ್ನಪ್ಪಿದ್ದು, ಸ್ಥಳೀಯರೇ ಅವರ ಅಂತ್ಯ ಸಂಸ್ಕಾರ ನೆರವೇರಿಸಿದರು. ಮೃತರ ಕುಟುಂಬದವರಿಗೆ ವಾಟ್ಸ್ಆ್ಯಪ್ ವಿಡಿಯೋ ಕರೆ ಮೂಲಕ ಅಂತ್ಯ ಕ್ರಿಯೆ ತೋರಿಸಿ ಗ್ರಾಮಸ್ಥರು ಮಾನವೀಯತೆ ಮೆರೆದಿದ್ದಾರೆ.
ದೂರದ ಪಶ್ಚಿಮ ಬಂಗಾಳ ಮೂಲದ ಕನೈದಾಸ್ ಎಂಬುವರು ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ನಗರದಲ್ಲಿ ಮೃತಪಟ್ಟಿದ್ದರು. ಅನೇಕ ವರ್ಷಗಳಿಂದ ತುಮಕೂರು ನಗರದಲ್ಲೇ ನೆಲೆಸಿದ್ದ ಈ ವ್ಯಕ್ತಿ. ನಗರದ ಎಂ.ಜಿ ರಸ್ತೆಯ ಕೃಷ್ಣ ಚಿತ್ರಮಂದಿರ ಬಳಿ ಕರವಸ್ತ್ರ ಮಾರಿಕೊಂಡು ಜೀವನ ನಡೆಸುತ್ತಿದ್ದರು.
ವರ್ಷಕ್ಕೊಮ್ಮೆ ಪಶ್ಚಿಮ ಬಂಗಾಳಕ್ಕೆ ಹೋಗಿ ಕುಟುಂಬ ನಿರ್ವಹಣೆಗೆ ಹೆಂಡತಿ ಮಕ್ಕಳಿಗೆ ಹಣ ಕೊಟ್ಟು ಬರುತ್ತಿದ್ದರು. ಎಲ್ಲರೊಂದಿಗೆ ಕನ್ನಡ ಭಾಷೆಯಲ್ಲೇ ಮಾತನಾಡುತ್ತ ಸುತ್ತಮುತ್ತಲಿನವರ ಮನಗೆದ್ದಿದ್ದರು.
ಹೃದಯಾಘಾತಕ್ಕೆ ಒಳಗಾಗಿದ್ದ ಅವರಿಗೆ ಸ್ಥಳೀಯ ಸಮಾಜ ಸೇವಕರಾದ ನಟರಾಜ್ ಮತ್ತು ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಏ.2ರಂದು ಮೃತಪಟ್ಟಿದ್ದರು. ಇನ್ನು ಲಾಕ್ ಡೌನ್ ಹಿನ್ನೆಲೆ ಶವವನ್ನು ಪಶ್ಚಿಮ ಬಂಗಾಳಕ್ಕೆ ಕಳುಹಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಕನೈದಾಸ್ ಕುಟುಂಬದವರ ಮನವಿ ಮೇರೆಗೆ ತುಮಕೂರಿನಲ್ಲಿಯೇ ಅಂತ್ಯ ಸಂಸ್ಕಾರ ಮಾಡಲಾಯಿತು.
ಅಲ್ಲದೇ ಕುಟುಂಬದವರ ಮನವಿಯಂತೆ ಅಂತ್ಯ ಸಂಸ್ಕಾರವನ್ನು ವಾಟ್ಸ್ ಆಪ್ ವಿಡಿಯೋ ಕಾಲ್ ಮಾಡಿ ತೋರಿಸಲಾಯಿತು. ತುಮಕೂರಿನ ಗಾರ್ಡನ್ ರಸ್ತೆಯ ಸ್ಮಶಾನದಲ್ಲಿ ಅಂತಿಮ ವಿಧಿ ವಿಧಾನಗಳನ್ನು ನಡೆಸಲಾಯಿತು..