ತುಮಕೂರು: ತುಮಕೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿರುವ ಪುರುಷರ ವಿದ್ಯಾರ್ಥಿ ನಿಲಯದಲ್ಲಿ ಹಿರಿಯ ವಿದ್ಯಾರ್ಥಿಗಳು ಬಂದು ವಾಸ್ತವ್ಯ ಹೂಡಬಾರದು ಎಂದು ಹಾಸ್ಟೆಲ್ ವಾರ್ಡನ್ ನೋಟಿಸ್ ಬೋರ್ಡಿನಲ್ಲಿ ಹಾಕಿದ್ದಾರೆ ಎನ್ನಲಾದ ನೋಟಿಸ್ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಹಾಸ್ಟೆಲ್ನಲ್ಲಿ ಮುಸುರೆ ಮತ್ತು ಎಂಜಲು ತಿನ್ನಲು ಬರಬಾರದು ಎಂದು ವಾರ್ಡನ್ ತಮ್ಮ ಸಹಿ ಹಾಗೂ ಸೀಲು ಸಹಿತ ನೋಟಿಸ್ ಬೋರ್ಡಿನಲ್ಲಿ ಹಾಕಿದ್ದಾರೆ ಎನ್ನಲಾಗ್ತಿದೆ. ಅಲ್ಲದೇ ಹಿರಿಯ ವಿದ್ಯಾರ್ಥಿಗಳಿಗೆ ತಿಳಿಸುವುದೇನೆಂದರೆ ಯಾವುದೇ ಕಾರಣಕ್ಕೂ ವಿದ್ಯಾರ್ಥಿನಿಲಯದಲ್ಲಿ ವಾಸ್ತವ್ಯ ಹೂಡಬಾರದು. ಮುಸುರೆ ಮತ್ತು ಎಂಜಲು ತಿನ್ನಲು ಬರಬಾರದು ಎಂದು ಈ ಮೂಲಕ ತಿಳಿಸಲಾಗುತ್ತಿದೆ. ಅನಾವಶ್ಯಕವಾಗಿ ಬಾಕ್ಸ್ ತೆಗೆದುಕೊಂಡು ಹೋಗುವುದು ಉತ್ತಮ ವ್ಯವಸ್ಥೆಗೆ ಮಾರಕವಾಗಿರುತ್ತದೆ. ವಿದ್ಯಾರ್ಥಿಗಳು ಸಹಕರಿಸಬೇಕು ಎಂದು ಈ ರೀತಿ ಬರೆದು ನೋಟಿಸ್ ಬೋರ್ಡ್ನಲ್ಲಿ ಹಾಕಲಾಗಿತ್ತು.
ಇದು ವಿದ್ಯಾರ್ಥಿಗಳ ತೀವ್ರ ಆಕ್ರೋಶಕ್ಕೆ ಗುರಿಯಾಗಿತ್ತು. ಇದಕ್ಕೆ ಸ್ಪಷ್ಟನೆ ನೀಡಿರುವ ತುಮಕೂರು ವಿಶ್ವವಿದ್ಯಾಲಯದ ಉಪಕುಲಪತಿ ಸಿದ್ದೇಗೌಡ, ಇದು ನನ್ನ ಗಮನಕ್ಕೆ ಬಂದಿಲ್ಲ. ಹಾಸ್ಟೆಲ್ನ ವಾರ್ಡನ್ ಮತ್ತು ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘಗಳು ಸೇರಿ ಯಾವ ರೀತಿಯ ವ್ಯವಸ್ಥೆಯನ್ನು ಮಾಡಬೇಕೋ ಅದನ್ನು ಮಾಡಿರುತ್ತಾರೆ. ಹಾಸ್ಟೆಲ್ನಲ್ಲಿ ಅಧಿಕೃತವಾಗಿ ಇರುವಂತಹ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಪೂರಕವಾಗಿ ನಿರ್ಧಾರ ತೆಗೆದುಕೊಂಡಿರುತ್ತಾರೆ ಎಂದರು.
ಓದಿ:ಮಾರ್ಚ್ 5ರಂದು ತುಮಕೂರು ವಿವಿ 14ನೇ ಘಟಿಕೋತ್ಸವ
ಹಾಸ್ಟೆಲ್ನಲ್ಲಿ ಸೆಕ್ಯುರಿಟಿ ಗಾರ್ಡ್ಗಳು ಇದ್ದರೂ, ಅದಕ್ಕೆ ಕ್ಯಾರೇ ಅನ್ನದೆ ಹಿರಿಯ ವಿದ್ಯಾರ್ಥಿಗಳು ನಡೆದುಕೊಳ್ಳುತ್ತಾರೆ. ಹೀಗಾಗಿ ಅವರ ಮನಸ್ಸಿಗೆ ಮುಟ್ಟುವ ರೀತಿಯಲ್ಲಿ ಕೆಲ ಕ್ರಮಗಳನ್ನು ತೆಗೆದುಕೊಂಡಿರುತ್ತಾರೆ. ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನಡೆಸಲು ಇಂತಹ ಕಠಿಣವಾದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಸಾಕಷ್ಟು ಬಾರಿ ಹೇಳಿದರೂ ಅದನ್ನು ಗಣನೆಗೆ ತೆಗೆದುಕೊಳ್ಳದಿದ್ದರೆ ಗುಣಮಟ್ಟ ಹಾಳಾಗುತ್ತದೆ ಎಂದಿದ್ದಾರೆ. ಹಿರಿಯ ವಿದ್ಯಾರ್ಥಿಗಳಿಗೆ ಮೌಖಿಕವಾಗಿ ಹೇಳಬಹುದು ಅಷ್ಟೇ, ಆದರೆ ಅಧಿಕೃತವಾಗಿ ನೋಟಿಸ್ ಬೋರ್ಡ್ನಲ್ಲಿ ಹಾಕುವುದು ಸಮಂಜಸವಲ್ಲ. ಈ ಬಗ್ಗೆ ನಾನು ವಿಚಾರಿಸುತ್ತೇನೆ ಎಂದು ಉಪಕುಲಪತಿ ಹೇಳಿದ್ದಾರೆ.