ತುಮಕೂರು: ಅಕ್ಟೋಬರ್ 30 ರಂದು ಕೊರಟಗೆರೆ ಮಾರ್ಗ ಮಧ್ಯೆ ಬಸ್ ಅಪಘಾತವಾಗಿ ಐದು ಜನ ಸ್ಥಳದಲ್ಲೇ ಮೃತಪಟ್ಟ ಹಿನ್ನೆಲೆಯಲ್ಲಿ ಮಂಗಳವಾರ ಕೊರಟಗೆರೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ನಗರದ ಜಿಲ್ಲಾಧಿಕಾರಿ ಕಚೇರಿವರೆಗೆ ವಿವಿಧ ಸಂಘಟನೆಗಳು ತುಮಕೂರಿನಿಂದ ಮಧುಗಿರಿ, ಪಾವಗಡ ಮಾರ್ಗವಾಗಿ ಚಲಿಸುವ ಖಾಸಗಿ ಬಸ್ಗಳ ಪರವಾನಗಿ ರದ್ದುಗೊಳಿಸಿ, ಸರ್ಕಾರಿ ಬಸ್ಗಳನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದವು.
ತುಮಕೂರಿನಿಂದ ಪಾವಗಡದವರೆಗೂ ಸಂಪರ್ಕ ಸಾಧಿಸುವ ರಾಜ್ಯ ಹೆದ್ದಾರಿಯಲ್ಲಿ ಖಾಸಗಿ ಬಸ್ಗಳ ಅತಿಯಾದ ವೇಗ ಮತ್ತು ಚಾಲಕನ ನಿರ್ಲಕ್ಷದಿಂದ ಪದೇ ಪದೆ ಅಪಘಾತಗಳು ಸಂಭವಿಸುತ್ತಿದ್ದು, ಅಮಾಯಕರ ಪ್ರಾಣ ಬಲಿಯಾಗುತ್ತಿದೆ. ಹೀಗಾಗಿ ಖಾಸಗಿ ಬಸ್ಗಳ ಪರವಾನಗಿ ನಿಷೇಧಿಸಿ ಕೆಎಸ್ಆರ್ಟಿಸಿ ವಾಹನಗಳ ಸಂಖ್ಯೆಯನ್ನು ಈ ಮಾರ್ಗದಲ್ಲಿ ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಇನ್ನು ಕಳೆದ ಅಕ್ಟೋಬರ್ನಲ್ಲಿ ಆದಂತಹ ಅಪಘಾತದಲ್ಲಿ ಹಾನಿಗೆ ಒಳಗಾದವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಈ ಪ್ರತಿಭಟನೆಯಲ್ಲಿ ಜಟ್ಟಿ ಅಗ್ರಹಾರ ನಾಗರಾಜು, ಸಾಮಾಜಿಕ ಚಿಂತಕ ಚೇತನ್, ಚಾಂದ್ ಪಾಷಾ ಹಾಗೂ ರೈತಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ದಲಿತ ಪರ ಸಂಘಟನೆಗಳು ಭಾಗಿಯಾಗಿದ್ದವು.