ತುಮಕೂರು: ಕೊರಟಗೆರೆಯಿಂದ ತುಮಕೂರು ಕಡೆಗೆ ಸಾಗುವ ಮಾರ್ಗ ಮಧ್ಯೆ ಜಂಪೇನಹಳ್ಳಿ ಕ್ರಾಸ್ ಬಳಿ ಅವೈಜ್ಞಾನಿಕ ರಸ್ತೆ ಕಾಮಗಾರಿ ಮಾಡಲಾಗಿದ್ದು. ಇಲ್ಲಿ ಮಳೆ ಬಂತೆಂದರೆ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾಮಾನ್ಯವಾಗಿ ರಸ್ತೆಗಳು ಸಾರ್ವಜನಿಕರ ಸಂಚಾರಕ್ಕೆ ಸುಲಭವಾಗಿರಬೇಕೆಂಬ ಉದ್ದೇಶದಿಂದ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಆದರೆ, ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನಲ್ಲಿ ನಿರ್ಮಿಸಿರುವ ರಸ್ತೆಯಲ್ಲಿ ಮಾತ್ರ ಸವಾರರು ಜೀವ ಬಿಗಿ ಹಿಡಿದುಕೊಂಡು ಸಂಚರಿಸಬೇಕಾದಂತಹ ಪರಿಸ್ಥಿತಿಯಿದೆ.
ತುಮಕೂರು ಮತ್ತು ಕೊರಟಗೆರೆ ನಡುವಿನ ರಸ್ತೆಯ ಜಂಪೇನಹಳ್ಳಿ ಕ್ರಾಸ್ನಲ್ಲಿ ಸಾಕಷ್ಟು ತಿರುವುಗಳಿದ್ದವು. ಇದಕ್ಕಾಗಿ 3 ವರ್ಷಗಳ ಹಿಂದೆ ಈ ಮಾರ್ಗಕ್ಕೆ ಪರ್ಯಾಯವಾಗಿ ಮತ್ತೊಂದು ರಸ್ತೆ ನಿರ್ಮಾಣ ಮಾಡಲಾಗಿದೆ. ಸನಿಹದಲ್ಲಿದ್ದ ಗುಡ್ಡವನ್ನ ಕೊರೆದು ಪರ್ಯಾಯ ರಸ್ತೆ ನಿರ್ಮಾಣ ಮಾಡಲಾಗಿದೆ.
ಆದರೆ, ಇದು ಅವೈಜ್ಞಾನಿಕವಾಗಿದ್ದು ಮಳೆ ಬಂತೆಂದರೆ ರಸ್ತೆ ಇಕ್ಕೆಲಗಳಲ್ಲಿ ಗುಡ್ಡ ಕುಸಿದು ಬೀಳುವ ಭಯವಿದೆ. ಹೀಗಾಗಿ ಜನರು ಈ ರಸ್ತೆಯಲ್ಲಿ ಓಡಾಡಲು ಹಿಂದೇಟು ಹಾಕುವಂತಾಗಿದೆ. ಇದನ್ನು ತಡೆಗಟ್ಟಲು ಅಧಿಕಾರಿಗಳು ಗುಡ್ಡದ ಮೇಲ್ಮೈಯಿಂದ ನೆಲದ ವರೆಗೂ ಕಬ್ಬಿಣದ ಬಲೆ (ಜಾಲರಿ) ಹಾಕಿದ್ದಾರೆ. ಆದರೆ ಬಲೆ ಹಾಕಿರುವ ಜಾಗದಲ್ಲಿಯೂ ಮಣ್ಣು, ಕಲ್ಲು ಕುಸಿಯುತ್ತಲೇ ಇದೆ.
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಗುಡ್ಡ ಕೊರೆದು ರಸ್ತೆ ಮಾಡುವಂತಹ ಅವೈಜ್ಞಾನಿಕ ಯೋಜನೆ ರೂಪಿಸಿದ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಇನ್ನೊಂದೆಡೆ ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ಮಳೆ ಬಂತು ಎಂದರೆ ಜೀವ ಬಿಗಿ ಹಿಡಿದು ವಿಧಿ ಇಲ್ಲದೇ ಸಂಚರಿಸುತ್ತಿದ್ದಾರೆ.