ತುಮಕೂರು : ನಗರದ ಪ್ರಮುಖ ಜಲಮೂಲಗಳಲ್ಲಿ ಒಂದಾಗಿರುವಂತಹ ಅಮಾನಿಕೆರೆಯಲ್ಲಿ ಪಕ್ಷಿಗಳಿಗೂ ಉತ್ತಮ ವಾತಾವರಣ ನಿರ್ಮಿಸಿಕೊಡಲು ನಿರ್ಧರಿಸಲಾಗಿದೆ. ಸ್ವಚ್ಛಂದವಾಗಿ ಪಕ್ಷಿಗಳ ತಾಣವಾಗಿಸಲು ಅಮಾನಿಕೆರೆಯಲ್ಲಿ ಎರಡು ದ್ವೀಪಗಳು ತಲೆಯೆತ್ತಲಿವೆ.
ಈಗಾಗಲೇ ಸ್ಮಾರ್ಟ್ ಸಿಟಿ ವತಿಯಿಂದ ಅಮಾನಿಕೆರೆ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗಿದೆ. ಈ ಕೆರೆಯಲ್ಲಿ 2 ದ್ವೀಪಗಳನ್ನು ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ. ಇಲ್ಲಿ ಅಭಿವೃದ್ಧಿಪಡಿಸಲಾಗುವ ದ್ವೀಪಗಳಲ್ಲಿ ಸಸಿಗಳನ್ನು ನೆಟ್ಟು ಮರಗಿಡಗಳನ್ನು ಬೆಳಸಲಾಗುವುದು.
ಈ ದ್ವೀಪಗಳಲ್ಲಿ ಪಕ್ಷಿಗಳಿಗೆ ಮಾತ್ರ ಸ್ವಚ್ಛಂದವಾಗಿ ಬದುಕಲು ಅವಕಾಶ ಮಾಡಿಕೊಡಲಾಗುವುದು. ಸಸಿಗಳನ್ನು ವ್ಯವಸ್ಥಿತವಾಗಿ ನೆಡಲು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ಪಕ್ಷಿತಜ್ಞರೊಂದಿಗೆ ಚರ್ಚಿಸಲಾಗಿದೆ. ಸಸಿಗಳನ್ನು ನೆಟ್ಟ ನಂತರ ಅವುಗಳನ್ನು ಸಂರಕ್ಷಿಸುವ ಕುರಿತಂತೆ ಕೂಡ ಯೋಜನೆ ರೂಪಿಸಲಾಗಿದೆ.
ಈ ಮೂಲಕ ಪ್ರಾಣಿ-ಪಕ್ಷಿಗಳು ಅಮಾನಿಕೆರೆ ಒಳಗೆ ಸ್ವಚ್ಛಂದವಾಗಿ ಹಾರಾಡಲು ಮತ್ತು ವಾಸಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಸಾರ್ವಜನಿಕರು ಕೂಡ ಇದಕ್ಕೆ ಸ್ವಯಂ ಪ್ರೇರಿತರಾಗಿ ಸಹಕಾರ ನೀಡುವುದು ಅಗತ್ಯವಾಗಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ತುಮಕೂರಿನ ಅಮಾನಿಕೆರೆ ಅಪಾರ ಸಂಖ್ಯೆಯ ಪಕ್ಷಿಗಳ ತಾಣವಾಗಿ ರೂಪಾಂತರಗೊಳ್ಳುವ ತಯಾರಿ ನಡೆಸಿದೆ.