ತುಮಕೂರು: ಮಹಿಳಾ ಠಾಣೆಯ ಪೊಲೀಸ್ ಸಿಬ್ಬಂದಿಗೆ ಯಾವುದೇ ಮಾಹಿತಿ ನೀಡದೇ ಮಧ್ಯರಾತ್ರಿ ದಿಢೀರ್ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಕಾರ್ಯವೈಖರಿ ಕಂಡು ಗರಂ ಆಗಿದ್ದಲ್ಲದೆ, ಎಚ್ಚರಿಕೆ ನೀಡಿದ್ದಾರೆ.
ಅನೇಕ ದಿನಗಳಿಂದ ಮಹಿಳಾ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಪೂರಕವಾಗಿ ಸ್ಪಂದಿಸುತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಎಸ್ಪಿ ಭೇಟಿ ನೀಡಿದ್ದರು. ಅಲ್ಲದೆ ರಾತ್ರಿ ವೇಳೆ ದಂಪತಿ ದೂರು ಹಿಡಿದು ಪೊಲೀಸ್ ಠಾಣೆ ಮುಂದೆ ನಿಂತಿದ್ದನ್ನು ಸ್ವತಃ ಎಸ್ಪಿಯವರೇ ಗಮನಿಸಿದ್ದಾರೆ. ಪೂರಕವಾಗಿ ಸ್ಪಂದಿಸದೆ ಇರುವುದನ್ನು ಕಂಡು ಪೊಲೀಸ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ತಕ್ಷಣ ಆ ದಂಪತಿಯ ಸಮಸ್ಯೆಯನ್ನು ಆಲಿಸಿದರು. ಅಲ್ಲದೆ ಮುಂಜಾನೆ ಪೊಲೀಸ್ ಠಾಣೆಗೆ ಬರುವಂತೆ ಸೂಚಿಸಿದರು. ಮಧ್ಯರಾತ್ರಿ 1 ಗಂಟೆಗೆ ಭೇಟಿ ನೀಡಿ, ನಂತರ 2 ಗಂಟೆಗೆ ಹಿಂತಿರುಗಿದ ಪೊಲೀಸ್ ವರಿಷ್ಠಾಧಿಕಾರಿ, ಸಿವಿಲ್ ಡ್ರೆಸ್‌ನಲ್ಲೇ ಭೇಟಿ ನೀಡಿ ಸಿಬ್ಬಂದಿಯ ಕಾರ್ಯ ನಿರ್ವಹಣಾ ರೀತಿ ಪರಿಶೀಲಿಸಿದರು. ಮಹಿಳಾ ಠಾಣೆ ಇನ್ಸ್‌ಪೆಕ್ಟರ್ ರಾಧಾಕೃಷ್ಣ ಈ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದರು.