ತುಮಕೂರು: ಸಾಧನೆ ಮಾಡಲು ಸಿದ್ದರಾದಾಗ ಅನೇಕ ಕ್ಲಿಷ್ಟಕರ ಸನ್ನಿವೇಶಗಳು ಎದುರಾಗೋದು ಸರ್ವೇಸಾಮಾನ್ಯ. ಆದರೆ, ಇಂತಹ ಅಡೆತಡೆಗಳನ್ನು ಮೆಟ್ಟಿ ನಿಂತಾಗ ಮಾತ್ರ ಅಂದುಕೊಂಡ ಗುರಿಯನ್ನ ತಲುಪೋಕೆ ಸಾಧ್ಯ. ಇದಕ್ಕೆ ಸೂಕ್ತ ಉದಾಹರಣೆಯಂತೆ ತುಮಕೂರು ವಿಶ್ವವಿದ್ಯಾಲಯದಲ್ಲಿ ನಡೆದ 14ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕಗಳನ್ನು ಗಳಿಸಿದ ಸಾಧಕಿಯರು ತಮ್ಮ ವೈಯಕ್ತಿಕ ಬದುಕಿನ ನೋವಿನಲ್ಲೂ ಗುರಿ ತಲುಪಿದಕ್ಕೆ ಸಂತಸಗೊಂಡಿದ್ದಾರೆ.
ಚಿಕ್ಕಂದಿನಲ್ಲೇ ಪೋಷಕರನ್ನು ಕಳೆದುಕೊಂಡ ನೇತ್ರಾವತಿ ಕೆ.ಪಿ, ತಮ್ಮ ಸಂಪೂರ್ಣ ವಿದ್ಯಾಭ್ಯಾಸವನ್ನು ಸ್ಕಾಲರ್ಶಿಪ್ ಹಣದಿಂದ ಮುಗಿಸಿದ್ದಾರೆ. ಸ್ನಾತಕೋತ್ತರ ಕನ್ನಡದಲ್ಲಿ 3ನೇ ರ್ಯಾಂಕ್ ಪಡೆದಿರುವ ಇವರು, 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ತಂದೆ-ತಾಯಿ ಇಬ್ಬರೂ ಕೂಡ ಅಸುನೀಗಿದ್ದರು.
ನಂತರ ಅಜ್ಜಿ ಮನೆಗೆ ತೆರಳಿ ಅಲ್ಲಿ ವಿದ್ಯಾಭ್ಯಾಸ ಮುಂದುವರೆಸಿದ್ದರು. ಸಂಬಂಧಿಕರು ಸಹಾಯಕ್ಕೆ ಬರದಿದ್ದ ಸಂದರ್ಭದಲ್ಲಿ ಸ್ಕಾಲರ್ಶಿಪ್ ಆಧಾರದ ಮೇಲೆ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಮುಖ್ಯವಾಗಿ ಸ್ನೇಹಿತರು ಹಾಗೂ ಉಪನ್ಯಾಸಕರು ನನಗೆ ಸಾಕಷ್ಟು ನೆರವು ನೀಡಿದ್ದು, ಭವಿಷ್ಯದಲ್ಲಿ ನನ್ನ ರೀತಿಯ ಅನಾಥರ ವಿದ್ಯಾಭ್ಯಾಸಕ್ಕಾಗಿ ಸಹಾಯ ಮಾಡುವಂತಹ ಉದ್ದೇಶ ಹೊಂದಿದ್ದೇನೆ ಎನ್ನುತ್ತಾರೆ.
ಜಿಲ್ಲೆಯ ತಿಪಟೂರು ತಾಲೂಕಿನ ರಾಮಗೊಂಡನಹಳ್ಳಿ ಎಂಬ ಕುಗ್ರಾಮದಿಂದ ಬಂದಂತಹ ವಿದ್ಯಾರ್ಥಿನಿ ಪಾವನ ಕೆ.ಎನ್ ಸ್ನಾತಕೋತ್ತರ ಪದವಿ ಪಡೆಯಲೇಬೇಕೆಂಬ ಹಠದೊಂದಿಗೆ ಕುಗ್ರಾಮದಿಂದ ತುಮಕೂರಿಗೆ ನಿತ್ಯ ಬಸ್ನಲ್ಲಿ ಪ್ರಯಾಣಿಸಿ ಇದೀಗ ತಮ್ಮ ಗುರಿಯನ್ನು ತಲುಪಿದ್ದಾರೆ.
ಇದೀಗ ಸ್ನಾತಕೋತ್ತರ ಕನ್ನಡದಲ್ಲಿ 5 ಚಿನ್ನದ ಪದಕಗಳನ್ನು ಪಡೆದು ಬೀಗುತ್ತಿರುವ ಇವರು, ಕಾಲೇಜು ಮುಗಿಸಿಕೊಂಡು ಮನೆಯಲ್ಲಿ ಹೋಗಿ ಓದಲು ಸಾಧ್ಯವಾಗುವುದಿಲ್ಲ ಎಂದು ನಿತ್ಯ ಬಸ್ ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿಯೇ ಓದುತ್ತಿದ್ದ ಅವರು, ಇದೀಗ ಬಂದ ಪ್ರತಿಫಲಕ್ಕೆ ಸಂತಸಗೊಂಡಿದ್ದಾರೆ.
ಓದಿ: ಯಾವನಿಗಿದೆ ಕನ್ನಡ ಕಿತ್ತುಕೊಳ್ಳುವ ತಾಕತ್ತು, ಬರೋಕೇಳಿ ನೋಡೋಣ: ನಟ ಕಿಚ್ಚ ಸುದೀಪ್
ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ 3 ಚಿನ್ನದ ಪದಕಗಳನ್ನು ಪಡೆದಿರುವ ವಿದ್ಯಾರ್ಥಿನಿ ವಾಣಿ, ಮುಂದಿನ ದಿನಗಳಲ್ಲಿ ಎನ್ಇಟಿ ಪರೀಕ್ಷೆ ಎದುರಿಸಿ ಉಪನ್ಯಾಸಕರಾಗಿ ಕೆಲಸ ಮಾಡಬೇಕೆಂಬ ಹಂಬಲ ಹೊಂದಿದ್ದಾರೆ.