ತುಮಕೂರು: ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ ಬಾಣಂತಿ ಹಾಗೂ ಅವಳಿ ಮಕ್ಕಳು ಮೃತಪಟ್ಟ ಪ್ರಕರಣ ಸಂಬಂಧ ಆಸ್ಪತ್ರೆಯ ವೈದ್ಯ ಹಾಗೂ ಮೂವರು ನರ್ಸ್ಗಳು ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಹಾಗಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಇಲಾಖಾ ತನಿಖೆಗೆ ಒಳಪಡಿಸಿ ಅಮಾನತು ಮಾಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ತಿಳಿಸಿದರು.
'ದಿಗ್ಭ್ರಮೆಗೊಳಗಾಗಿದ್ದೇನೆ': ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರೋಗ್ಯ ಇಲಾಖೆ ಸಿಬ್ಬಂದಿ ಅತಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಗರ್ಭಿಣಿ ಆಸ್ಪತ್ರೆಗೆ ಬಂದಾಗ ಆಧಾರ್ ಕಾರ್ಡ್, ತಾಯಿ ಕಾರ್ಡ್ ಕೇಳಿದ್ದಾರೆ. ಆದರೆ ಅದ್ಯಾವುದೂ ಆಕೆ ಬಳಿ ಇರಲಿಲ್ಲ. ಮೊದಲ ಹೆರಿಗೆ ನಾರ್ಮಲ್ ಆಗಿದ್ದರಿಂದ ಮಹಿಳೆ ಈ ಬಾರಿಯೂ ಹಾಗೇ ಆಗಲಿದೆ ಎಂದುಕೊಂಡಿದ್ದಾಳೆ. ಕರ್ತವ್ಯದಲ್ಲಿದ್ದ ದಾದಿಯರು, ವೈದ್ಯರು ತಕ್ಷಣ ಮಹಿಳೆಗೆ ಚಿಕಿತ್ಸೆ ಕೊಡಿಸಬಹುದಿತ್ತು.
ಆದರೆ ಹಾಗೆ ಮಾಡಿಲ್ಲ. ಮೇಲ್ನೋಟಕ್ಕೆ ಇದು ಹೆರಿಗೆ ವಾರ್ಡ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನರ್ಸ್ಗಳು, ಡಾಕ್ಟರ್ ಗಳ ನಿರ್ಲಕ್ಷ್ಯ ಎಂಬುದು ಗೊತ್ತಾಗುತ್ತಿದೆ. ಇದು ಕೇವಲ ಕರ್ತವ್ಯ ಲೋಪ ಮಾತ್ರವಲ್ಲ, ವೈದ್ಯರು, ವೈದ್ಯಕೀಯ ಸಿಬ್ಬಂದಿ ಅಮಾನುಷವಾಗಿ ನಡೆದುಕೊಂಡಿದ್ದಾರೆ. ಈ ಘಟನೆಯಿಂದ ದಿಗ್ಭ್ರಮೆಗೊಳಗಾಗಿದ್ದೇನೆ ಎಂದರು.
ಪ್ರಕರಣದ ಹಿನ್ನೆಲೆ: ತುಮಕೂರಿನ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಆಗಮಿಸಿದ್ದ ತಾಯಿ ಮತ್ತು ಅವಳಿ ಮಕ್ಕಳ ಬಗ್ಗೆ ವೈದ್ಯರು ನಿರ್ಲಕ್ಪ್ಯ ತೋರಿದ್ದರು. ವೈದ್ಯೆಯ ಬಳಿ ಪರಿಪರಿಯಾಗಿ ಬೇಡಿಕೊಂಡರೂ ತಾಯಿ ಕಾರ್ಡ್ ಇಲ್ಲ ಎಂಬ ಕಾರಣಕ್ಕೆ ಆಸ್ಪತ್ರೆಯಿಂದ ವಾಪಸ್ ಕಳುಹಿಸಿದ್ದರು. ಈ ರೀತಿಯ ನಿರ್ಲಕ್ಷ್ಯದಿಂದಲೇ ತಾಯಿ ಮತ್ತು ಅವಳಿ ಮಕ್ಕಳು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಜಿಲ್ಲಾಸ್ಪತ್ರೆಗೆ ದಾಖಲಿಸಿಕೊಳ್ಳದ ಆರೋಪ: ರಕ್ತ ಸ್ರಾವದಿಂದ ಬಾಣಂತಿ.. ಹುಟ್ಟಿದ ಅವಳಿ ಮಕ್ಕಳ ಸಾವು