ತುಮಕೂರು: ನಗರದ ತಿಲಕ್ ಪಾರ್ಕ್ ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಡುವ ಪ್ರದೇಶದಲ್ಲಿ 59.3 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು, ಕಳೆದೆರಡು ವರ್ಷಗಳಲ್ಲಿ ಒಂದೇ ಬಾರಿಗೆ ದೊರೆತಿರುವ ಹೆಚ್ಚಿನ ಪ್ರಮಾಣದ ಗಾಂಜಾ ಪ್ರಕರಣ ಇದಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ತಿಳಿಸಿದ್ದಾರೆ.
ಪಿಹೆಚ್ ಕಾಲೋನಿಯಲ್ಲಿರುವ ರಿಯಾಜ್, ಮೊಹಮ್ಮದ್ ತನ್ವೀರ್, ಇರ್ಷಾದ್, ಆಸಿಮ್ ಇವರುಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಮಹಮ್ಮದ್ ತನ್ವೀರ್ ಬಂಧಿಸಲಾಗಿದೆ. ಉಳಿದವರು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಬಲೆ ಬೀಸಲಾಗಿದೆ ಎಂದರು.
ಓದಿ: ಆಟೋ, ಕಾರ್ ಪುಡಿಗಟ್ಟಿದ ಕಿಡಿಗೇಡಿಗಳು: ಶಿವಮೊಗ್ಗದ ಗಾಂಧಿ ಬಜಾರ್ ಪ್ರಕ್ಷುಬ್ದ
ಕಳೆದ ಒಂದೂವರೆ ತಿಂಗಳಿನಿಂದ ನಮ್ಮ ಸಿಬ್ಬಂದಿ ಗಾಂಜಾ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿದ್ದಾರೆ. ಗಾಂಜಾ ಆಂಧ್ರಪ್ರದೇಶದಿಂದ ಬಂದಿರಬಹುದು ಎಂಬುದರ ಬಗ್ಗೆ ಸಂಶಯವಿದ್ದು, ಇದರ ಬಗ್ಗೆ ಸಂಪೂರ್ಣವಾಗಿ ತನಿಖೆ ನಡೆಸಲಾಗುವುದು. ತುಮಕೂರು ಜಿಲ್ಲೆಯನ್ನು ಗಾಂಜಾ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.