ತುಮಕೂರು: ಆರು ಮಂದಿ ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸಿರುವ ತುಮಕೂರು ಪೊಲೀಸರು, 55 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಗಂಜಿಗೆರೆ ಮಂಜಪ್ಪ, ರಂಗಪ್ಪ, ಲೋಕೇಶ, ವೆಂಕಟೇಶ, ನವೀನ, ರವಿ ಬಂಧಿತ ಕಳ್ಳರಾಗಿದ್ದಾರೆ. ಅಮೃತೂರು ಹೋಬಳಿ ಮಾರ್ಕೋನಹಳ್ಳಿ ಗ್ರಾಮದ ಲೀಲಾವತಿ ಎಂಬುವರ ಮನೆಗೆ ಅಕ್ಟೋಬರ್ 10ರಂದು ನುಗ್ಗಿದ ಕಳ್ಳರು, 180 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಕದ್ದೊಯ್ದಿದ್ದರು. ಈ ಸಂಬಂಧ ಅಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಳ್ಳರ ಬಂಧನಕ್ಕೆ ವಿಶೇಷ ಪೊಲೀಸ್ ತಂಡವನ್ನು ರಚನೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಅಮೃತೂರು, ತುರುವೇಕೆರೆ, ಹಿರೀಸಾವೆ, ಬಾಣಾವರ, ಪಟ್ಟನಾಯಕನಹಳ್ಳಿ, ಶಿರಾ, ತಾವರೆಕೆರೆ, ಹೊನ್ನವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ಕುರಿ, ಕೋಳಿ, ಮೇಕೆ, ಸೇರಿದಂತೆ ಚಿನ್ನಾಭರಣಗಳನ್ನು ದೋಚುತ್ತಿದ್ದ ಖದೀಮರು, ಒಟ್ಟು 15 ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಅಲ್ಲದೆ ಬಂಧಿತರಿಂದ 55 ಲಕ್ಷ ರೂ. ಬೆಲೆ ಬಾಳುವ 616 ಗ್ರಾಂ ಚಿನ್ನದ ಒಡವೆ, 108 ಕುರಿಗಳು ಮತ್ತು ಕೃತ್ಯಕ್ಕೆ ಬಳಸಿದ್ದ ಕಾರು, ಗ್ಯಾಸ್ ಕಟರ್ ವಶಪಡಿಸಿಕೊಳ್ಳಲಾಗಿದೆ.