ತುಮಕೂರು: ನಗರದಲ್ಲಿ ಯುಗಾದಿ ಹಾಗೂ ಶ್ರೀ ರಾಮನವಮಿ ಹಬ್ಬದಂದು ದೇವಾಲಯಗಳಲ್ಲಿ ತೀರ್ಥ, ಪ್ರಸಾದ ವಿನಿಯೋಗ ಮಾಡದಂತೆ ಸೂಚಿಸಲಾಗಿದೆ.
ಈ ಸಂಬಂಧ ದೇವಾಲಯಗಳ ಅರ್ಚಕರ ಜೊತೆ ಸಭೆ ನಡೆಸಲಾಗಿದ್ದು, ಅರ್ಚಕರು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಮಹಾನಗರ ಪಾಲಿಕೆಯ ಮೇಯರ್ ಫರೀದಾ ಬೇಗಂ ತಿಳಿಸಿದ್ದಾರೆ.
ನಗರದ ಪ್ರಮುಖ ದೇವಾಲಯಗಳ ಅರ್ಚಕರನ್ನು ಹಾಗೂ ಹಿರಿಯರನ್ನು ಕರೆಸಿ ಸಭೆ ನಡೆಸಲಾಗಿದ್ದು, ಈ ಸಭೆಯಲ್ಲಿ ಬೆಳಗ್ಗಿನ ವೇಳೆ ಮತ್ತು ಸಂಜೆಯ ವೇಳೆ ಒಂದು ಗಂಟೆಯ ಕಾಲ ದೇವಾಲಯವನ್ನು ತೆರೆಯಬೇಕು. ಭಕ್ತರಿಗೆ ತೀರ್ಥ-ಪ್ರಸಾದ ವಿನಿಯೋಗ ಕಾರ್ಯವನ್ನು ಮಾರ್ಚ್ 31ರವರೆಗೆ ಮಾಡಬಾರದು ಎಂದು ತಿಳಿಸಲಾಗಿದೆ.
ಇನ್ನು ಯುಗಾದಿ ಹಬ್ಬದಂದು ದೇವಸ್ಥಾನಗಳಿಗೆ ಹೋಗುವ ಭಕ್ತರು ಗುಂಪು-ಗುಂಪಾಗಿ ಹೋಗದೆ, ದೇವಾಲಯಗಳಲ್ಲಿ ಹೆಚ್ಚು ಕಾಲ ಇರದೆ, ಪೂಜೆ ಮುಗಿಸಿ ತಮ್ಮ ಮನೆಗಳಿಗೆ ತೆರಳುವಂತೆ ಮನವಿ ಮಾಡಿಕೊಂಡರು.
ಮಹಾನಗರ ಪಾಲಿಕೆಗೆ ಆಗಮಿಸುವ ಪ್ರತಿಯೊಬ್ಬ ಸಾರ್ವಜನಿಕರಿಗೂ ಆರೋಗ್ಯದ ದೃಷ್ಟಿಯಿಂದ ಪರೀಕ್ಷೆಯನ್ನು ಮಾಡಲಾಗುವುದು. ಮಹಾನಗರ ಪಾಲಿಕೆಯಅಧಿಕಾರಿಗಳಿಗೆ, ಸಿಬ್ಬಂದಿಗೆ ಸ್ಯಾನಿಟರಿ ಜೊತೆಗೆ ಪೌರಕಾರ್ಮಿಕರಿಗೆ ಮಾಸ್ಕ್ ನೀಡಲಾಗುವುದು ಎಂದು ತಿಳಿಸಿದರು.