ತುಮಕೂರು : ಕಳೆದೆರಡು ದಿನಗಳಿಂದ ಜನರು ಆಯುಧಪೂಜೆ, ವಿಜಯದಶಮಿ ಎಂದು ಮಾರುಕಟ್ಟೆಗೆ ಹೋಗಿ ಹೂ, ಬಾಳೆಕಂದು, ಬೂದುಗುಂಬಳ ತಂದು ವಾಹನಗಳನ್ನು ಸಿಂಗರಿಸಿ ಪೂಜೆ ಸಲ್ಲಿಸಿ ಸಂಭ್ರಮಿಸಿದ್ದರು. ಅದೇ ರೀತಿ, ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಕೂಡ ಭರ್ಜರಿ ವ್ಯಾಪಾರ ಮಾಡಿ ಲಾಭ ಮಾಡಿಕೊಂಡ ವ್ಯಾಪಾರಸ್ಥರು ಮಿಕ್ಕ ವಸ್ತುಗಳನ್ನೆಲ್ಲಾ ವ್ಯಾಪಾರ ಮಾಡಿದ ಜಾಗದಲ್ಲೇ ಬಿಟ್ಟು ಹೋಗಿದ್ದು ಮಾರುಕಟ್ಟೆ ಕಸದ ರಾಶಿಯಾಗಿ ಮಾರ್ಪಟ್ಟಿದೆ.
ತುಮಕೂರು ನಗರದ ಅಂತರಸನಹಳ್ಳಿ ಬಳಿಯಿರುವ ಮಾರುಕಟ್ಟೆ ಸುತ್ತಮುತ್ತ ಎತ್ತ ನೋಡಿದರೂ ಕಸದ ರಾಶಿ ಆವರಿಸಿದೆ, ರಸ್ತೆ ಪಕ್ಕದಲ್ಲಿ ಮಾರಾಟ ಮಾಡುತ್ತಿದ್ದ ವ್ಯಾಪಾರಸ್ಥರು ಎಲ್ಲೆಂದರಲ್ಲಿ ಮಿಕ್ಕ ವಸ್ತುಗಳನ್ನೆಲ್ಲ ಎಸೆದು ಹೋಗಿದ್ದಾರೆ. ಹಬ್ಬದ ಖುಷಿಯಲ್ಲಿ ಮಸ್ತ್ ವ್ಯಾಪಾರ ಮಾಡಿದ್ದ ವ್ಯಾಪಾರಸ್ಥರು ಹಬ್ಬ ಮುಗಿದ ಮೇಲೆ ಬೇಕಾಬಿಟ್ಟಿಯಾಗಿ ಕಸ ಎಸೆದು ಹೋಗಿರುವುದು ನಿಜಕ್ಕೂ ಬೇಸರದ ಸಂಗತಿ.
ಇನ್ನು ಮಹಾನಗರ ಪಾಲಿಕೆ ಸ್ವಚ್ಛತೆಗೆ ಆದ್ಯತೆ ನೀಡಿ, ನಗರದಲ್ಲಿ ನಿತ್ಯ ಕಸ ಸಂಗ್ರಹಿಸುವ ಕಾರ್ಯ ಮಾಡುತ್ತದೆ. ಆದರೆ, ವ್ಯಾಪಾರಸ್ಥರು ತಮ್ಮ ಕೆಲಸ ಆದಮೇಲೆ ಎಲ್ಲೆಂದರಲ್ಲಿ ಕಸ ಬಿಟ್ಟು ಹೋಗಿರುವುದು ಪಾಲಿಕೆ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಬಿದ್ದಿರುವ ಕಸವನ್ನು ಎತ್ತಿ ಹಾಕಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇನ್ನು ಮುಂದಾದರೂ ಹಬ್ಬ-ಹರಿದಿನಗಳಲ್ಲಿ ವ್ಯಾಪಾರಸ್ಥರು ಎಲ್ಲೆಂದರಲ್ಲಿ ಕಸ ಬಿಟ್ಟು ಹೋಗದಂತೆ ಎಚ್ಚರವಹಿಸಬೇಕಾದ ಕಾರ್ಯವನ್ನು ಸಂಬಂಧಪಟ್ಟ ಅಧಿಕಾರಿಗಳು ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.