ತುಮಕೂರು: ಉದ್ಯೋಗ ಅರಸಿ ಬೇರೆ ಜಿಲ್ಲೆಗಳಿಗೆ ಹೋಗಿದ್ದ ಬಹುತೇಕ ಮಂದಿ ತವರಿಗೆ ಹಿಂತಿರುಗಿದ್ದು, ಹೈನುಗಾರಿಕೆಗೆ ಕಡೆಗೆ ಹೆಚ್ಚಿ ಒಲವು ನೀಡುತ್ತಿದ್ದಾರೆ. ಈ ಮೂಲಕ ಬೇಸಿಗೆಯಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿದ್ದ ಹಾಲಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ.
ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಕೊರೊನಾ ಹರಡುವಿಕೆ ಭೀತಿ ಹಿನ್ನೆಲೆಯಿಂದಾಗಿ ಲಾಕ್ಡೌನ್ ಘೋಷಣೆಯಾಗಿತ್ತು. ಉದ್ಯೋಗ ಅರಸಿ ಜಿಲ್ಲೆಯಿಂದ ಹೊರ ಹೋಗಿದ್ದ ಬಹುತೇಕ ಮಂದಿ ವಾಪಸ್ ತಮ್ಮ ಗ್ರಾಮಗಳಿಗೆ ಬಂದಿದ್ದರು. ಅಲ್ಲದೇ ಕೈಯಲ್ಲಿ ಕೆಲಸವಿಲ್ಲದೇ ಅನಿವಾರ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ರೈತಾಪಿ ವರ್ಗದವರು ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಿದ್ದು, ಇದರಿಂದ ಅತಿ ಕಡಿಮೆ ಪ್ರಮಾಣದಲ್ಲಿ ಬೇಸಿಗೆಯಲ್ಲಿ ಉತ್ಪಾದನೆಯಾಗುತ್ತಿದ್ದ ಹಾಲಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ.
ಕಳೆದ ವರ್ಷದ ಜೂನ್ ತಿಂಗಳವರೆಗೂ 8,77,373 ಲೀಟರ್ ಹಾಲು ಶೇಖರಣೆಯಾಗಿತ್ತು. ಇನ್ನೊಂದೆಡೆ ಮಾರುಕಟ್ಟೆ ಗಣನೀಯವಾಗಿ ಕುಸಿದು ಹೋಗಿತ್ತು. ಇದರಿಂದಾಗಿ ಶೇಖರಣೆಯಾಗಿದ್ದ ಹಾಲನ್ನು ವಿಲೇವಾರಿ ಮಾಡುವುದೆ ದೊಡ್ಡ ಸವಾಲಿನ ಕೆಲಸವಾಗಿತ್ತು. ಆದರೆ, ಕಳೆದ ಬಾರಿಯಂತೆ ಈ ಬಾರಿಯೂ ನಿರೀಕ್ಷೆಗೂ ಮೀರಿ ಹಾಲು ಶೇಖರಣೆ ಹೆಚ್ಚಾಗುತ್ತಿದೆ.
ಓದಿ: ಸಿಡಿ ಪ್ರಕರಣ: ಸಂತ್ರಸ್ತ ಯುವತಿ ಪೋಷಕರನ್ನು ಬಿಗಿ ಭದ್ರತೆಯಲ್ಲಿ ವಿಜಯಪುರಕ್ಕೆ ಶಿಫ್ಟ್ ಮಾಡಿದ ಪೊಲೀಸ್
ಪ್ರತಿವರ್ಷ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಸರಾಸರಿ 6 ಲಕ್ಷ ಲೀ ಹಾಲು ಸಂಗ್ರಹಣೆ ಆಗುತ್ತಿತ್ತು. ಆದರೆ, ಈ ಬಾರಿ ಬೇಸಿಗೆ ಇದ್ದರೂ ಸುಮಾರು 7 ಲಕ್ಷದ 60 ಸಾವಿರ ಲೀ ಹಾಲು ಸಂಗ್ರಹವಾಗುತ್ತಿದೆ. ಈ ಬೆಳವಣಿಗೆಯಿಂದಾಗಿ ತುಮಕೂರು ಜಿಲ್ಲೆಯಿಂದ ಹೊರ ಹೋಗಿದ್ದ ಜನರು ವಾಪಸ್ ಕೆಲಸ ಅರಸಿ ಹೋಗದೇ ಬಹುತೇಕ ಮಂದಿ ಹೈನುಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಇದರಿಂದ ಸ್ಪಷ್ಟವಾಗುತ್ತಿದೆ.