ತುಮಕೂರು: ಜಿಲ್ಲೆಯಲ್ಲಿ 19,000 ಪಡಿತರ ಚೀಟಿಗಳು ಸಕ್ರಿಯವಾಗಿಲ್ಲ. 50 ಸಾವಿರ ಕಾರ್ಡ್ದಾರರು ಬ್ಯಾಂಕ್ ಖಾತೆಯನ್ನೇ ಹೊಂದಿಲ್ಲ ಎಂದು ಜಿಲ್ಲಾಧಿಕಾರಿ ಶ್ರೀನಿವಾಸ್ ತಿಳಿಸಿದರು. ತುಮಕೂರಿನಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಡಿತರ ಚೀಟಿದಾರರ ಬ್ಯಾಂಕ್ ಖಾತೆಗಳನ್ನು ಸಕ್ರಿಯಗೊಳಿಸಲು ಸೂಚನೆ ನೀಡಲಾಗಿದೆ ಎಂದರು.
ಅನ್ನಭಾಗ್ಯ ಯೋಜನೆಗೆ 30 ಕೋಟಿ ರೂ ಹಣ ಬಿಡುಗಡೆ ಆಗಿದೆ. ಯೋಜನೆಯ ಯಶಸ್ಸಿಗೆ ಜಿಲ್ಲಾಡಳಿತ ಅವಿರತ ಪ್ರಯತ್ನ ನಡೆಸುತ್ತಿದೆ ಎಂದರು. ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ವಿಚಾರ ಕುರಿತು ಮಾತನಾಡಿ, ಜಿಲ್ಲೆಯಲ್ಲಿ 6,61,625 ಪಡಿತರ ಚೀಟಿಗಳಿವೆ. ಇದರಲ್ಲಿ 5,29,000 ಫಲಾನುಭವಿಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುವುದು ಎಂದು ಹೇಳಿದರು.
ಸಕ್ರಿಯವಾಗಿರುವ ಕಾರ್ಡ್ಗೆ ಒಟ್ಟು 30 ಕೋಟಿ ರೂ ವೆಚ್ಚವಾಗಲಿದೆ. ಇನ್ನು 2-3 ದಿನದಲ್ಲಿ ಖಾತೆಗೆ ಜಮಾ ಮಾಡಲಿದ್ದೇವೆ. ನೇರ ಹಣ ಪಾವತಿ ಮೂಲಕ (DBT) ಖಾತೆಗಳಿಗೆ ಹಣವನ್ನು ಎರಡು ಮೂರು ದಿನಗಳಲ್ಲಿ ಜಮೆ ಮಾಡಲಾಗುವುದು. ಗ್ರಾಮದ ಅಂಚೆ ಇಲಾಖೆಯಲ್ಲೇ ಬ್ಯಾಂಕ್ ಖಾತೆ ತೆರೆಯಲು ಯೋಜನೆ ರೂಪಿಸಿದ್ದೇವೆ. ನಾಗರಿಕರು ಕೂಡಲೇ ತಮ್ಮ ಬ್ಯಾಂಕ್ ಖಾತೆ ಸಕ್ರಿಯಗೊಳಿಸಿ, ನಂತರ ನಿಮ್ಮ ಖಾತೆಗೆ ಹಣ ಬರಲಿದೆ ಎಂದು ಜಿಲ್ಲಾಧಿಕಾರಿ ಶ್ರೀನಿವಾಸ್ ಸಲಹೆ ನೀಡಿದರು.
ಇದನ್ನೂ ಓದಿ: Annabhagya scheme: ಅನ್ನಭಾಗ್ಯ ಯೋಜನೆಯ ನೇರ ನಗದು ವರ್ಗಾವಣೆಗೆ ಸಿಎಂ ಚಾಲನೆ.. ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ
ಸಾರಯುಕ್ತ ಮಿಶ್ರಿತ ಅಕ್ಕಿ ವಿತರಣೆ ಗೊಂದಲ ವಿಚಾರ: ಪಡಿತರ ಅಂಗಡಿಗಳಲ್ಲಿ ನೀಡಲಾಗುತ್ತಿರುವ ಸಾರಯುಕ್ತ ಮಿಶ್ರಿತ ಅಕ್ಕಿಯ ಕುರಿತು ಜನರಲ್ಲಿ ಸಾಕಷ್ಟು ಗೊಂದಲ ನಿರ್ಮಾಣ ಉಂಟಾಗಿದೆ. ಪಡಿತರ ಅಂಗಡಿಯಲ್ಲಿ ಪಡೆದ ಅಕ್ಕಿಯಲ್ಲಿನ ಸಾರಯುಕ್ತ ಅಕ್ಕಿಯನ್ನು ಬೇರ್ಪಡಿಸಿ ಸಾರ್ವಜನಿಕರು ಉಪಯೋಗಿಸುತ್ತಿರುವುದು ಹೆಚ್ಚಾಗಿದೆ. ಸಾರಯುಕ್ತ ಅಕ್ಕಿಯ ಕುರಿತು ಸಾರ್ವಜನಿಕರಿಗೆ ಸ್ಪಷ್ಟ ಮಾಹಿತಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡುತ್ತಿಲ್ಲ. ತೀವ್ರ ಗೊಂದಲದಲ್ಲಿರುವ ಸಾರ್ವಜನಿಕರು ಸಾರಾಯುಕ್ತ ಅಕ್ಕಿಯನ್ನು ಬೇರ್ಪಡಿಸಿ ಬಳಸುತ್ತಿದ್ದಾರೆ ಎಂದು ಅವರು ಹೇಳಿದರು.
ಅಕ್ಕಿ ಬದಲು ಹಣ ನೀಡುವ ಸಮಸ್ಯೆ ತಾತ್ಕಾಲಿಕ- ಮಧು ಬಂಗಾರಪ್ಪ: ಅನ್ನಭಾಗ್ಯ ಯೋಜನೆ ಕುರಿತು ಸಚಿವ ಮಧು ಬಂಗಾರಪ್ಪ ಮೂರು ದಿನಗಳ ಹಿಂದೆ ಪ್ರತಿಕ್ರಿಯಿಸಿದ್ದರು. ಯೋಜನೆಯಡಿ ಅಕ್ಕಿಯ ಬದಲು ಹಣ ನೀಡಲಾಗುತ್ತಿದೆ. ಹಲವು ಫಲಾನುಭವಿಗಳ ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ಗಳಲ್ಲಿನ ಹೆಸರಿನ ವ್ಯತ್ಯಾಸ ಬಗ್ಗೆ ಕ್ರಮವಹಿಸಿ ಹಣ ತಲುಪಿಸಲಾಗುವುದು. ಕೇಂದ್ರ ಸರ್ಕಾರದವರು ಅಕ್ಕಿ ನೀಡಿದ್ದರೆ ಈ ರೀತಿಯ ಸಮಸ್ಯೆಯ ಪ್ರಶ್ನೆ ಇರುತ್ತಿರಲಿಲ್ಲ. ಅವರು (ಕೇಂದ್ರ) ಅಕ್ಕಿ ನೀಡದಿದ್ದ ಹಿನ್ನೆಲೆಯಲ್ಲಿ ಹಣ ಕೊಡುವ ಸಮಸ್ಯೆ ಉದ್ಭವಿಸಿದೆ. ಇದು ತಾತ್ಕಾಲಿಕವಾಗಿದ್ದು, ಶೀಘ್ರವೇ ಪರಿಹಾರವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಮನಮೋಹನ್ ಸಿಂಗ್ ಅಕ್ಕಿ ಕೊಟ್ಟಿದ್ದು, ಬಿಜೆಪಿ ಹೆಸರೇಳಲು ಪ್ರಕಾಶ್ ರಾಥೋಡ್ ನಕಾರ: ಕಾಂಗ್ರೆಸ್ ಬಿಜೆಪಿ ಜಟಾಪಟಿ