ತುಮಕೂರು: ಕೊರೊನಾ ಸೋಂಕು ಇರುವ ಬೇರೆ ಜಿಲ್ಲೆಯಿಂದ ಜಿಲ್ಲೆಯ ಹಳ್ಳಿಗಳಿಗೆ ಜನರು ಹೆಚ್ಚಾಗಿ ಬರುತ್ತಿದ್ದಾರೆ. ಅಂತಹವರ ಮೇಲೆ ಜಿಲ್ಲಾಡಳಿತ ವಿಲೇಜ್ ಟಾಸ್ಕ್ ಫೋರ್ಸ್ ಮೂಲಕ ಹದ್ದಿನ ಕಣ್ಣು ಇರಿಸಿದೆ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದರು.
ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಬರುವ ವ್ಯಕ್ತಿಗಳ ಬಗ್ಗೆ ನಿತ್ಯ ಮಾಹಿತಿ ಪಡೆಯಲಾಗುತ್ತಿದೆ. ಅಲ್ಲದೆ ಅಂತಹ ವ್ಯಕ್ತಿಗಳ ವೈದ್ಯಕೀಯ ಪರೀಕ್ಷೆ ಮಾಡಲಾಗುತ್ತಿದೆ. ನಾಳೆಯಿಂದ ಜಿಲ್ಲಾದ್ಯಂತ ಇನ್ನಷ್ಟು ಕಟ್ಟೆಚ್ಚರ ವಹಿಸಲಾಗುವುದು. ಲಾಕ್ಡೌನ್ ಬಗ್ಗೆ ಜನರು ಇನ್ನಷ್ಟು ಗಂಭೀರವಾಗಿ ತೆಗೆದುಕೊಳ್ಳಬೇಕು. ಉಲ್ಲಂಘನೆ ಆಗದಂತೆ ನಾಲ್ಕು ಮೊಬೈಲ್ ಸ್ಕ್ವಾಡ್ಗಳನ್ನು ರಚಿಸಲಾಗಿದೆ ಎಂದಿದ್ದಾರೆ.
ಪ್ರತಿ ಮೊಬೈಲ್ ಸ್ಕ್ವಾಡ್ನಲ್ಲಿ ಕಂದಾಯ, ಪೊಲೀಸ್ ಇಲಾಖೆ ಅಧಿಕಾರಿಗಳು ಇರುತ್ತಾರೆ. ನಿರಂತರವಾಗಿ ಗಸ್ತು ತಿರುಗುತ್ತಿರುತ್ತಾರೆ. ಲಾಕ್ಡೌನ್ ಉಲ್ಲಂಘನೆ ಮಾಡುವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಿಂದ ಕಳುಹಿಸಿದ್ದ ಸ್ಯಾಂಪಲ್ಗಳ ವರದಿ ನೆಗೆಟಿವ್ ಬಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪ್ರಧಾನಿ ಮೋದಿ ಅವರು ಮೇ. 3ರವರೆಗೆ ಲಾಕ್ಡೌನ್ ವಿಸ್ತರಣೆ ಬಗ್ಗೆ ಘೋಷಣೆ ಮಾಡಿದ್ದಾರೆ. ಈ ಆದೇಶ ತುಮಕೂರು ಜಿಲ್ಲೆಯಲ್ಲಿಯೂ ಮುಂದುವರೆಯಲಿದೆ ಎಂದರು.