ತುಮಕೂರು: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರೋ ಹಿನ್ನೆಲೆಯಲ್ಲಿ ತುಮಕೂರು ನಗರಕ್ಕೆ ಸೀಮಿತವಾದಂತೆ ಏಪ್ರಿಲ್ 10ರಿಂದ 10 ದಿನಗಳ ಕಾಲ ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ತಿಳಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅಗತ್ಯ ವಸ್ತುಗಳ ಸೇವೆಯನ್ನು ಹೊರತುಪಡಿಸಿ ಹೋಟೆಲ್, ಬಾರ್, ಪಬ್ ರೆಸ್ಟೋರೆಂಟ್ಗಳಿಗೆ ಅವಕಾಶವಿಲ್ಲ. ರಾತ್ರಿ ವೇಳೆ ಯಾರೂ ಕೂಡ ತಿರುಗಾಡುವಂತಿಲ್ಲ ಎಂದಿದ್ದಾರೆ.
ಅಲ್ಲದೆ, ಸರಕಾರದಿಂದ ಇನ್ನಷ್ಟು ಗೈಡ್ಲೈನ್ಸ್ ಬರಲಿದೆ. ರಾಜ್ಯದ 8 ನಗರಗಳಲ್ಲಿ ಏಪ್ರಿಲ್ 10ರಿಂದ 10 ದಿನಗಳ ಕಾಲ ರಾತ್ರಿ ಕರ್ಫ್ಯೂ ಹಾಕಬೇಕು ಎಂದು ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಈ ಕುರಿತಂತೆ ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ಸಭೆ ನಡೆಸಲಾಗಿದೆ ಎಂದರು.
ತುಮಕೂರು ನಗರದಲ್ಲಿ ರಾತ್ರಿ ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಪಾಲಿಸಲು ಪೊಲೀಸರನ್ನು ನಿಯೋಜಿಸಿ, ಜನರು ಗುಂಪು ಸೇರುವುದನ್ನು ನಿಯಂತ್ರಿಸಲಾಗುವುದು. ಶಿರಾ ಮತ್ತು ಗುಬ್ಬಿ ತಾಲೂಕಿನಲ್ಲಿಯೂ ಸೋಂಕಿತರ ಸಂಖ್ಯೆಯ ಜಾಸ್ತಿ ಇದೆ. ಬೆಂಗಳೂರು ತುಮಕೂರು ನಡುವೆ ನಿತ್ಯ 50 ಸಾವಿರ ಮಂದಿ ಓಡಾಡುತ್ತಾರೆ. ಹೀಗಾಗಿ ಬೆಂಗಳೂರು ಕಡೆಯಿಂದಲೇ ಸೋಂಕಿತರ ಸಂಖ್ಯೆ ಜಾಸ್ತಿಯಾಗಿದೆ. ಮದುವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಜನ ಸೇರುತ್ತಿರುವುದರಿಂದ ಸೋಂಕಿತರು ಅಧಿಕವಾಗುತ್ತಿದ್ದಾರೆ ಎಂದು ತಿಳಿಸಿದರು.
ಸೊಂಕಿತರನ್ನು ಪತ್ತೆ ಹಚ್ಚಲು ಪರೀಕ್ಷೆ ನಡೆಸಲು ತಾಲೂಕುವಾರು ಗುರಿ ನಿಗದಿಪಡಿಸಲಾಗಿದೆ. ಕನಿಷ್ಠ ಪ್ರತಿ ತಾಲೂಕಿನಲ್ಲಿ 500 ಮಂದಿಯನ್ನು ಪರೀಕ್ಷೆಗೆ ಒಳಪಡಿಸುವಂತೆ ಸೂಚಿಸಲಾಗಿದೆ. ಸೋಂಕಿತರ ಪ್ರಥಮ ಸಂಪರ್ಕಿತರನ್ನು ಪತ್ತೆ ಹಚ್ಚಿ 72 ಗಂಟೆಯೊಳಗೆ ಅವರಿಗೆ ಚಿಕಿತ್ಸೆ ನೀಡುವಂತೆ ತಿಳಿಸಲಾಗಿದೆ. ಕೇವಲ ಆರೋಗ್ಯ ಇಲಾಖೆ ಮಾತ್ರ ಇದನ್ನು ನಿಭಾಯಿಸಲು ಕಷ್ಟವಾಗಲಿದೆ ಎಂಬ ಉದ್ದೇಶದಿಂದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್, ಕಂದಾಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗೆ ಸಹಕಾರದೊಂದಿಗೆ ಕಾರ್ಯಕ್ರಮ ಜಾರಿಗೊಳಿಸಲಾಗುತ್ತಿದೆ ಎಂದರು.