ತುಮಕೂರು: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ದೇವೇಗೌಡರ ಸೋಲಿಗೆ ಪಕ್ಷದ ಮುಖಂಡರೇ ಕಾರಣವಾಗಿದ್ದಾರೆ ಎಂದು ಆರೋಪಿಸಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರಿಗೆ ತುಮಕೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ ಪತ್ರ ಬರೆದಿದ್ದಾರೆ.
ಅಲ್ಲದೆ ಮಾಜಿ ಶಾಸಕ ಕೆ.ಎನ್.ರಾಜಣ್ಣ, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ರಾಜೇಂದ್ರ ಅವರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಅವರು ಕೋರಿದ್ದಾರೆ. ಇನ್ನು ದೇವೇಗೌಡರ ಸೋಲಿಗೆ ಕೆ.ಎನ್.ರಾಜಣ್ಣ, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ರಾಜೇಂದ್ರ, ಗ್ರಾಪಂ ಸದಸ್ಯ ಜೆ.ಜೆ.ರಹನಾ, ಚೂಡಪ್ಪ ಶಾಂತ್ಲಾ ರಾಜಣ್ಣ, ಮಂಜುಳಾ ನಾರಾಯಣ ರೆಡ್ಡಿ ಸೇರಿದಂತೆ ತಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು ಕಾರಣವಾಗಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.
ಹಾಗೇ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಹೊಂದಾಣಿಕೆ ಕೊರತೆ ಕೂಡಾ ಈ ಸೋಲಿಗೆ ಕಾರಣವಾಗಿದೆ. ಇನ್ನು ಲೋಕಸಭಾ ಚುನಾವಣೆಯಲ್ಲಿ ಮಾಡಿಕೊಂಡ ಮೈತ್ರಿಯಂತೆ ತುಮಕೂರು ಕ್ಷೇತ್ರದಿಂದ ದೇವೇಗೌಡರನ್ನು ಕಣಕ್ಕಿಳಿಸುವ ಮುನ್ನವೇ ಮಾಜಿ ಸಂಸದ ಮುದ್ದಹನುಮೇಗೌಡ ಹಾಗೂ ಕೆ.ಎನ್.ರಾಜಣ್ಣ ತಮ್ಮ ನಾಮಪತ್ರ ಸಲ್ಲಿಸಿದ್ದರು. ಇದರಿಂದ ಕಾರ್ಯಕರ್ತರಲ್ಲಿ ಗೊಂದಲ ಏರ್ಪಟ್ಟಿತ್ತು. ಭಾರೀ ಹೈಡ್ರಾಮಾ ಬಳಿಕ ಅವರು ತಮ್ಮ ನಾಮಪತ್ರ ವಾಪಸ್ ಪಡೆದಿದ್ರು. ಆದರೆ ಅವರ ಬೆಂಬಲಿಗರು ಮಾತ್ರ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಲಿಲ್ಲ ಎಂದು ರಾಮಕೃಷ್ಣ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಲದೆ ಮುದ್ದಹನುಮೇಗೌಡರು ಕೇವಲ ಎರಡು ಕಡೆ ಮಾತ್ರ ಪ್ರಚಾರ ಮಾಡಿ ಉಳಿದ ಕಡೆ ಮಾಡದ ಕಾರಣ ಅದು ಬಿಜೆಪಿಗೆ ವರವಾಯಿತು. ಅಲ್ಲದೆ ಸಹಾಕಾರ ಮಹಾಮಂಡಳದ ಅಧ್ಯಕ್ಷ ಎನ್.ಗಂಗಣ್ಣ ಹಾಗೂ ಇತರರು ಬಿಜೆಪಿ ಪರವಾಗಿ ಹಣ ಹಂಚಿದರು. ಹಾಗೇ ಕಾಂಗ್ರಸ್ನಿಂದ ಕೊಟ್ಟ ಹಣವನ್ನು ಕೂಡಾ ಬಿಜೆಪಿ ಪರವಾಗಿ ಹಂಚಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದೇ ವೇಳೆ ಮೇಲೆ ಸೂಚಿಸಿರುವ ಮುಖಂಡರ ವಿರುದ್ಧ ಪಕ್ಷದ ಹೈಕಮಾಂಡ್ ಗಂಭೀರ ಕ್ರಮ ಕೈಗೊಳ್ಳುವಂತೆ ರಾಮಕೃಷ್ಣ ಮನವಿ ಮಾಡಿದ್ದಾರೆ.