ತುಮಕೂರು: ಹಲವು ದಿನಗಳಿಂದ ಕೋರಂ ಕೊರತೆಯಿಂದ ಸೂಕ್ತ ಸಭೆ ನಡೆಯದೇ ನನೆಗುದಿಗೆ ಬಿದ್ದಿದ್ದ ಜಿಲ್ಲಾ ಪಂಚಾಯತ್ನಲ್ಲಿನ 4 ಕ್ರಿಯಾ ಯೋಜನೆಗಳಿಗಿಂದು ಅನುಮೋದನೆ ದೊರೆಯಿತು.
ಜಿಲ್ಲಾ ಪಂಚಾಯತ್ ಅಧ್ಯಕ್ಷರ ಬದಲಾವಣೆಗೆ ಸದಸ್ಯರು ಪಟ್ಟುಹಿಡಿದ ಹಿನ್ನೆಲೆ ಯಾವುದೇ ರೀತಿಯ ಸಭೆಯಲ್ಲಿ ಭಾಗವಹಿಸಿದೇ ಕೋರಂ ಕೊರತೆ ಎದುರಾಗುತ್ತಿತ್ತು. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಖುದ್ದು ಜಿಲ್ಲಾ ಪಂಚಾಯತ್ನ ಎಲ್ಲ ಸದಸ್ಯರಿಗೂ ಪತ್ರ ಬರೆದು ಸಭೆಗೆ ಹಾಜರಾಗುವಂತೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಸದಸ್ಯರು ಸಭೆಗೆ ಹಾಜರಾಗಿ ಇಂದು 4 ಕ್ರಿಯಾ ಯೋಜನೆಗಳಿಗೆ ಅನುಮೋದನೆ ಪಡೆಯಲು ಸಹಕಾರ ನೀಡಿದರು.
ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ ಆಯವ್ಯಯದಲ್ಲಿ ಒದಗಿಸಿದ ಜಿಲ್ಲಾವಾರು ಅನುದಾನವನ್ನು ರಸ್ತೆ ಉದ್ದಳತೆಯ ಆಧಾರದ ಮೇಲೆ ತಾಲೂಕುವಾರು ಹಂಚಿಕೆ ಮಾಡಿ ಕ್ರಿಯಾಯೋಜನೆ ರೂಪಿಸಿ ಕಾರ್ಯಕ್ರಮ ಅನುಷ್ಠಾನಗೊಳಿಸಲು ಸಾಮಾನ್ಯ ಸಭೆಯಲ್ಲಿ ಅನುಮೋದಿಸಲಾಯಿತು. 140 ಲಕ್ಷ ರೂ. ಅನುದಾನಕ್ಕೆ ಅನುಮೋದನೆ ಪಡೆಯಲಾಯಿತು.
2020- 21ನೇ ಸಾಲಿನ ವಾರ್ಷಿಕ ಕ್ರಿಯಾಯೋಜನೆ ಜಿಲ್ಲಾ ಪಂಚಾಯತ್ ಕಾರ್ಯಕ್ರಮಗಳಿಗೆ ಇಲಾಖಾವಾರು ನಿಗದಿಪಡಿಸಿದ 52,978 ಲಕ್ಷ ರೂ. ಗಳಿಗೆ, 2020 21 ನೇ ಸಾಲಿನ ಜಿಲ್ಲಾ ಪಂಚಾಯತ್ ಶಾಸನಬದ್ಧ ಅನುದಾನ ಕ್ರಿಯಾಯೋಜನೆಯ 693.58 ಲಕ್ಷ ರೂ.ಗಳಿಗೆ ಮತ್ತು 2020 21 ನೇ ಸಾಲಿನ 15ನೇ ಹಣಕಾಸು ಯೋಜನೆಯ ಕಾಮಗಾರಿಗಳ ಕ್ರಿಯಾ ಯೋಜನೆಯ 897.72 ಲಕ್ಷ ರೂ. ಗಳಿಗೂ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು.