ಬೆಂಗಳೂರು: ತುಮಕೂರಿನ ಮರಳೂರು ಗ್ರಾಮದ ಸರಸ್ವತಿಪುರ ಬಡಾವಣೆಯಲ್ಲಿ ಪಾರ್ಕ್ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಮುಂದಿನ ಏಪ್ರಿಲ್‌ನೊಳಗೆ ಪೂರ್ಣಗೊಳಿಸಲಾಗುವುದು ಎಂದು ಹೈಕೋರ್ಟ್‌ಗೆ ನಗರ ಪಾಲಿಕೆ ಭರವಸೆ ನೀಡಿದೆ.
ಸರಸ್ವತಿಪುರ ಬಡಾವಣೆಯಲ್ಲಿ ಪಾರ್ಕ್‌ಗೆ ಮೀಸಲಿಟ್ಟಿದ್ದ ಜಾಗದಲ್ಲಿ ರಸ್ತೆ ನಿರ್ಮಿಸಲಾಗಿದೆ ಎಂದು ಆರೋಪಿಸಿ ಡಿ.ವಿ.ಗಂಗಯ್ಯ ಸೇರಿದಂತೆ ಆರು ಮಂದಿ ಸ್ಥಳೀಯ ನಿವಾಸಿಗಳು ಸಲ್ಲಿಸಿದ್ದ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ ವಿಚಾರಣೆ ನಡೆಸಿದರು. ವಿಚಾರಣೆಗೆ ಹಾಜರಾದ ತುಮಕೂರು ನಗರ ಪಾಲಿಕೆ ಪರ ವಕೀಲರು, ಪಾರ್ಕ್ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. 2022ರ ಅ.18ರಂದು ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. 2023ರ ಏ.18ರೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ನಕ್ಷೆಯ ಪ್ರಕಾರವೇ ಬಡಾವಣೆಯಲ್ಲಿ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು. ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ ಅರ್ಜಿ ಇತ್ಯರ್ಥಪಡಿಸಿತು.
ತುಮಕೂರು ಜಿಲ್ಲೆಯ ಮರಳೂರು ಗ್ರಾಮದಲ್ಲಿ ಸರ್ವೇ ನಂಬರ್ 45/1ಎ ಯಲ್ಲಿನ ಒಂದು ಎಕರೆ ಪ್ರದೇಶದಲ್ಲಿ ಬಡಾವಣೆ ನಿರ್ಮಿಸಲಾಗಿದ್ದು, 15ಕ್ಕೂ ಹೆಚ್ಚು ನಿವೇಶನ ರಚಿಸಲಾಗಿದೆ. ಆದರೆ, ಬಡಾವಣೆಯಲ್ಲಿ ಪಾರ್ಕ್‌ಗೆ ಮೀಸಲಿಟ್ಟಿದ್ದ 5,600 ಚದರಡಿ ಜಾಗದಲ್ಲಿ ರಸ್ತೆ ನಿರ್ಮಿಸಲಾಗಿದೆ. ಪಾರ್ಕ್ ಪಕ್ಕದಲ್ಲೇ ನಕ್ಷೆ ಪ್ರಕಾರ ಬಹಳ ಹಿಂದೆ ರಸ್ತೆಯೊಂದನ್ನು ನಿರ್ಮಾಣ ಮಾಡಿದ್ದು, ಅದನ್ನು ಸದ್ಯ ಮುಚ್ಚಲಾಗಿದೆ. ಆ ಜಾಗದಲ್ಲಿ ನಿವೇಶನ ರಚಿಸಲು ಪ್ರಯತ್ನಿಸಲಾಗುತ್ತಿದೆ. ಪಾರ್ಕ್ ಅಭಿವೃದ್ಧಿಪಡಿಸಲು ಕೋರಿ ಅರ್ಜಿದಾರರು 2020 ರಿಂದ ಹಲವು ಬಾರಿ ಸಲ್ಲಿಸಿದ ಮನವಿ ಪತ್ರವನ್ನು ಪಾಲಿಕೆ ಪರಿಗಣಿಸಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿತ್ತು. ಅರ್ಜಿದಾರ ಪರ ವಕೀಲ ಡಿ.ಮೋಹನ್ ಕುಮಾರ್ ವಾದ ಮಂಡಿಸಿದ್ದರು.
ಇದನ್ನೂ ಓದಿ: ವಿಚ್ಛೇದಿತ ಮಹಿಳೆಗೆ ಜೀವನಾಂಶ ಹೆಚ್ಚಳಕ್ಕೆ ಅವಕಾಶ ನೀಡಿದ ಹೈಕೋರ್ಟ್