ತುಮಕೂರು: ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಈ ಬಾರಿ ಒಂದೆಡೆ ರಾಗಿ ಫಸಲು ಭರ್ಜರಿಯಾಗಿ ರೈತರ ಕೈಸೇರಿದರೆ, ಇನ್ನೊಂದೆಡೆ ಹುಣಸೆ ಹಣ್ಣು ಕೂಡ ಉತ್ತಮ ಇಳುವರಿಯೊಂದಿಗೆ ರೈತರ ಕೈ ಹಿಡಿದಿದೆ.
ಜಿಲ್ಲೆಯ ಬಹುತೇಕ ಬಯಲು ಸೀಮೆ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುವ ಹುಣಸೆ ಹಣ್ಣು ಗುಣಮಟ್ಟದ ಬೆಳೆಯಾಗಿ ಪರಿವರ್ತನೆಗೊಂಡಿದೆ. ಪ್ರಸ್ತುತ ಬಹುತೇಕ ಜಿಲ್ಲೆಯ ಪ್ರಮುಖ ಎಪಿಎಂಸಿ ಮಾರುಕಟ್ಟೆಗಳಲ್ಲಿ ಹುಣಸೆಹಣ್ಣು ಬೇಡಿಕೆ ಕಳೆದ ವರ್ಷಕ್ಕಿಂತ ಶೇ.50 ರಷ್ಟು ಹೆಚ್ಚಾಗಿದೆ. ಅಲ್ಲದೆ ಉತ್ತಮ ಗುಣಮಟ್ಟದಿಂದ ಕೂಡಿರುವುದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಲ್ಲಿ ಮಾರಾಟವಾಗುತ್ತಿದೆ.
ತುಮಕೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಗುಣಮಟ್ಟಕ್ಕೆ ತಕ್ಕಂತೆ ಪ್ರತಿ ಕ್ವಿಂಟಲ್ಗೆ 10 ಸಾವಿರ ದಿಂದ 30 ಸಾವಿರ ರೂ.ಗಳವರೆಗೆ ಖರೀದಿದಾರರು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ಬಹುತೇಕ ಮಳೆಯಾದ ಪರಿಣಾಮ ಹುಣಸೆ ಹಣ್ಣು ಮಾರುಕಟ್ಟೆಗೆ ಬಂದಿದೆ. ಸಾಮಾನ್ಯವಾಗಿ ಬೇಡಿಕೆ ಹೆಚ್ಚಾದಂತೆ ಬೆಲೆ ಪಾತಾಳಕ್ಕೆ ಕುಸಿಯುತ್ತದೆ. ಆದರೆ ಪ್ರಸ್ತುತ ಹುಣಸೆ ಹಣ್ಣಿನ ಮಾರುಕಟ್ಟೆಯಲ್ಲಿ ಮಾತ್ರ ಅಪಾರ ಪ್ರಮಾಣದಲ್ಲಿ ಬರುತ್ತಿದ್ದರೂ ಬೆಲೆಯಲ್ಲಿ ಯಾವುದೇ ಏರುಪೇರು ಉಂಟಾಗಿಲ್ಲ. ಇದು ರೈತರಿಗೆ ಸಮಾಧಾನ ತರಿಸಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಶೇ.80ರಷ್ಟು ಮಾರುಕಟ್ಟೆಗೆ ಬರುತ್ತಿದ್ದು ತುಮಕೂರು ತಾಲೂಕು ಚಿಕ್ಕನಾಯಕನಹಳ್ಳಿ, ಮಧುಗಿರಿ, ಕೊರಟಗೆರೆ, ಶಿರಾ ತಾಲೂಕು ವ್ಯಾಪ್ತಿಯಲ್ಲಿ ಹುಣಸೆಹಣ್ಣು ಮಾರುಕಟ್ಟೆಗೆ ಬರುತ್ತಿದೆ. ತುಮಕೂರು ಎಪಿಎಂಸಿಯಿಂದ ಆಂಧ್ರ ಮತ್ತು ತಮಿಳುನಾಡು ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹುಣಸೆಹಣ್ಣು ಸರಬರಾಜು ಆಗುತ್ತಿದೆ. ಸ್ಥಳೀಯವಾಗಿ ಹುಣಸೆಹಣ್ಣು ಬಳಕೆ ಕಡಿಮೆ ಇರುವುದರಿಂದ ಹೊರ ರಾಜ್ಯಗಳಲ್ಲಿ ಹೆಚ್ಚಿನ ಬೇಡಿಕೆಯಿದ್ದು ರೈತರಿಗೂ ಕೂಡ ಉತ್ತಮ ಬೆಲೆ ದೊರೆಯಲು ಸಹಕಾರಿಯಾಗಿದೆ.