ತುಮಕೂರು: ನಗರದ ಅಭಿವೃದ್ಧಿ ಹಾಗೂ ಜನರ ಹಿತಕ್ಕಾಗಿ ತಿಪಟೂರು ನಗರಸಭೆ ಆಯುಕ್ತ ಉಮಾಕಾಂತ್ ನಗರದ ಕೆಂಪಮ್ಮ ದೇವಾಲಯದಲ್ಲಿ ಉರುಳು ಸೇವೆ ಮಾಡಿದ್ದಾರೆ. ಬುಧವಾರ ದೇವಸ್ಥಾನದ ಎದುರು ತಣ್ಣೀರಿನಲ್ಲಿ ಸ್ನಾನ ಮಾಡಿ ಉರುಳು ಸೇವೆ ಮಾಡಿ ಭಕ್ತಿ ಸಮರ್ಪಣೆ ಮಾಡಿದ್ದಾರೆ. ಅಲ್ಲದೆ ತಿಪಟೂರು ನಗರಸಭೆ ಆಯುಕ್ತರಾಗಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ನಗರ ದೇವತೆಗೆ ಹರಕೆ ತೀರಿಸಿದ್ದಾರೆ.
ಈ ಕುರಿತಂತೆ ಈಟಿವಿ ಭಾರತಕ್ಕೆ ಮಾಹಿತಿ ನೀಡಿರುವ ಅವರು, ಈ ಹಿಂದೆಯೂ ಮಡಿಕೇರಿಯಲ್ಲಿ ಮತ್ತು ಚಿಕ್ಕಬಳ್ಳಾಪುರದಲ್ಲಿ ನಗರಸಭೆ ಆಯುಕ್ತನಾಗಿ ಕೆಲಸ ಮಾಡಿದ್ದ ವೇಳೆ ನಗರ ದೇವತೆಗೆ ಪೂಜೆ ಸಲ್ಲಿಸಿದ್ದೇನೆ. ಅಲ್ಲದೆ ಸುಮಾರು 20 ವರ್ಷಗಳ ಕಾಲ ಕೋಲಾರದಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಉರುಳು ಸೇವೆ ಮಾಡಿ ನಗರದ ಅಭಿವೃದ್ಧಿಗೆ ಹರಕೆ ತೀರಿಸುತ್ತಿದ್ದೆ. ಇದು ನನ್ನ ವೈಯಕ್ತಿಕ ವಿಷಯವಾಗಿದೆ ಎಂದು ತಿಳಿಸಿದ್ದಾರೆ.
ಇನ್ನೊಂದೆಡೆ, ತಿಪಟೂರು ಶಾಸಕ ನಾಗೇಶ್ ಸಚಿವರಾದ ಕಾರಣ ದೇವಿಗೆ ಹರಕೆ ತೀರಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ನನ್ನ ಹರಕೆಗೂ, ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನಾನು ಸರ್ಕಾರಿ ಕೆಲಸ ಮಾಡುವಂತಹ ಯಾವುದೇ ಸ್ಥಳಕ್ಕೆ ಹೋದರೂ ಅಲ್ಲಿನ ನಗರ ದೇವತೆಗೆ ಪೂಜೆ ಸಲ್ಲಿಸುವುದು ನಾನು ಜೀವನದಲ್ಲಿ ರೂಢಿಸಿಕೊಂಡು ಬಂದಿರುವಂತಹ ಪದ್ಧತಿಯಾಗಿದೆ ಎಂದು ತಿಳಿಸಿದ್ದಾರೆ.
ಅಲ್ಲದೆ ವಿಧಾನಸೌಧದಲ್ಲಿ ನಾನು ಸರ್ಕಾರಿ ಉದ್ಯೋಗಿಯಾಗಿ ಕೆಲಸ ಮಾಡಿದ್ದು, ಆ ಸಂದರ್ಭದಲ್ಲಿ ಅಣ್ಣಮ್ಮ ದೇವಿಯ ದೇಗುಲದಲ್ಲಿ ಪೂಜೆ ಸಲ್ಲಿಸುತ್ತಿದ್ದೆ ಎಂದು ತಿಳಿಸಿದ್ದಾರೆ.