ತುಮಕೂರು: ಮೂವರು ಅನಾಥ ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬರಕನಹಾಲ್ ತಾಂಡಾದಲ್ಲಿ ನಡೆದಿದೆ. ರಂಜಿತಾ(24) ಬಿಂದು (21) ಹಾಗೂ ಚಂದನ (18) ಆತ್ಮಹತ್ಯೆಗೆ ಶರಣಾದ ಸಹೋದರಿಯರಾಗಿದ್ದಾರೆ. ಒಂಟಿ ಮನೆಯಲ್ಲಿ ಘಟನೆ ನಡೆದಿರುವುದು ಗುರುವಾರ ಬೆಳಕಿಗೆ ಬಂದಿದ್ದು, ಒಂಬತ್ತು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ.
ಮೂವರು ಸಹೋದರಿಯರಿಗೆ ಅನೇಕ ವರ್ಷಗಳ ಹಿಂದೆಯೇ ಪೋಷಕರು ಮೃತಪಟ್ಟಿದ್ದ ಕಾರಣ ಅಂದಿನಿಂದಲೂ ಅಜ್ಜಿಯ ಜೊತೆಗೆ ವಾಸವಿದ್ದರು. ಆದರೆ, ಇತ್ತೀಚೆಗೆ ಅಜ್ಜಿಯೂ ಮರಣ ಹೊಂದಿದ್ದರು. ಇದರ ಬಳಿಕ ಸಹೋದರಿಯರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಇವರಲ್ಲಿ ಇಬ್ಬರು ಸಹೋದರಿಯರು ಕಿಬ್ಬನಹಳ್ಳಿ ಬಳಿಯ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದರು. 9 ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಶಂಕೆ ಇದ್ದು, ಶವ ಕೊಳೆತು ವಾಸನೆ ಬಂದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಮರಾಜನಗರದಲ್ಲಿ ಅತ್ಯಾಚಾರ ಅಪರಾಧಿಗೆ ಜೈಲು ಶಿಕ್ಷೆ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಅಪರಾಧಿಗೆ ಎರಡು ವರ್ಷ ಜೈಲು ಶಿಕ್ಷೆ ನೀಡಿ ಚಾಮರಾಜನಗರದ ಮಕ್ಕಳ ಸ್ನೇಹಿ ನ್ಯಾಯಾಲಯವು ಗುರುವಾರ ಆದೇಶ ನೀಡಿದೆ. ಹನೂರು ತಾಲೂಕಿನ ಮಂಗಲ ಗ್ರಾಮದ ರಮೇಶ್ ಶಿಕ್ಷೆಗೊಳಗಾದ ಅಪರಾಧಿ. 2020ರ ಸೆಪ್ಟೆಂಬರ್ನಲ್ಲಿ ಅಪ್ರಾಪ್ತೆ ಒಬ್ಬಳಿಗೆ ಪ್ರೀತಿಸು ಎಂದು ಬಲವಂತ ಮಾಡಿ, ಇಲ್ಲದ ಆಸೆ ತೋರಿಸಿ ಲೈಂಗಿಕ ದೌರ್ಜನ್ಯ ಎಸಗಿರುವುದು ಸಾಬೀತಾಗಿತ್ತು.
ಈ ಹಿನ್ನೆಲೆಯಲ್ಲಿ ಮಕ್ಕಳ ಸ್ನೇಹಿ ನ್ಯಾಯಾಲಯ ಹಾಗೂ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ನಿಶಾರಾಣಿ ಅವರು ಅಪರಾಧಿಗೆ ಎರಡು ವರ್ಷ ಶಿಕ್ಷೆ, 5 ಸಾವಿರ ರೂ. ದಂಡ ವಿಧಿಸಿದ್ದಾರೆ. ನೊಂದ ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರದಿಂದ 20 ಸಾವಿರ ರೂ. ಪರಿಹಾರ ಕೊಡಬೇಕೆಂದು ಸೂಚಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಕೆ.ಯೋಗೆಶ್ ವಾದ ಮಂಡಿಸಿದ್ದರು.
ಚಾಮರಾಜನಗರದಲ್ಲಿ ಆನೆ ದಾಳಿಗೆ ವ್ಯಕ್ತಿಗೆ ಬಲಿ: ಚಾಮರಾಜನಗರ ತಾಲೂಕಿನ ಎತ್ತಗಟ್ಟಿ ಬೆಟ್ಟ ವ್ಯಾಪ್ತಿಯಲ್ಲಿ ಆನೆಗಳನ್ನು ಕಾಡಿಗಟ್ಟುವ ವೇಳೆ ಹೆಣ್ಣಾನೆಯೊಂದು ನಡೆಸಿದ ದಾಳಿಯಲ್ಲಿ ಅರಣ್ಯ ಇಲಾಖೆ ದಿನಗೂಲಿ ನೌಕರನಾದ, ಪುಣಜನೂರು ನಿವಾಸಿ ನಂಜಯ್ಯ (35) ಮೃತಪಟ್ಟಿದ್ದಾರೆ. ಚಾಮರಾಜನಗರ ಕಾಡಂಚಿನ ಪ್ರದೇಶದಲ್ಲಿ ತಮಿಳುನಾಡು ಭಾಗದಿಂದ ಆನೆಗಳು ಲಗ್ಗೆ ಇಟ್ಟಿರುವ ಹಿನ್ನೆಲೆಯಲ್ಲಿ ಆನೆ ಓಡಿಸುವ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಈ ವೇಳೆ ಆನೆಯೊಂದು ಏಕಾಏಕಿ ದಾಳಿ ಮಾಡಿದ ಪರಿಣಾಮ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಚಾಮರಾಜನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಕೊಳ್ಳೇಗಾಲದಲ್ಲಿ ಎರಡು ತಲೆ ಹಾವು ಸಾಗಾಟ: ಎರಡು ತಲೆ ಹಾವು ಸಾಗಾಟ ಮಾಡುತ್ತಿದ್ದ ಖದೀಮರನ್ನು ಬಂಧಿಸಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಜಾಗೇರಿ ಸಮೀಪ ನಡೆದಿದೆ. ಕೊಪ್ಪಳ ಮೂಲದ ಬಸವರಾಜು ಹಾಗೂ ರಾಯಚೂರು ಮೂಲದ ಹನುಮಂತ ಬಂಧಿತ ಆರೋಪಿಗಳು. ಇಲ್ಲದ ಕಥೆ ಕಟ್ಟಿ, ಜನರಿಗೆ ಟೋಪಿ ಹಾಕುವ ಉದ್ದೇಶದಿಂದ ಮಣ್ಣು ಮುಕ್ಕುವ ಹಾವನ್ನು ಹಿಡಿದು ಸಾಗಿಸುವಾಗ ಅರಣ್ಯ ಸಂಚಾರಿ ದಳದ ಪೊಲೀಸರು ದಾಳಿ ನಡೆಸಿ ಇವರನ್ನು ಬಂಧಿಸಿದ್ದಾರೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೊಳ್ಳೇಗಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಶಿವಮೊಗ್ಗದ ಹೊಸನಗರದಲ್ಲಿ ರೈತ ಆತ್ಮಹತ್ಯೆ: ಸಾಲಭಾದೆಯಿಂದ ರೈತ ತನ್ನ ಹೊಲದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊಸನಗರ ತಾಲೂಕಿನ ಕಾರಕ್ಕಿ ಗ್ರಾಮದಲ್ಲಿ ನಡೆದಿದೆ. ಹೊಸನಗರ ತಾಲೂಕಿನ ಕಾರಕ್ಕಿ ಗ್ರಾಮದ ರಾಜಪ್ಪ ಎಂಬ ರೈತ ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡವರು.
ಕಾರಕ್ಕಿ ಗ್ರಾಮದಲ್ಲಿ ಒಂದೂವರೆ ಎಕರೆ ಹೊಲ ಹೊಂದಿರುವ ರಾಜಪ್ಪ ವಿವಿಧೆಡೆಗಳಿಂದ ಸಾಲ ಪಡೆದುಕೊಂಡಿದ್ದರು ಎನ್ನಲಾಗಿದೆ. ರಾಜಪ್ಪರವರಿಗೆ ಪತ್ನಿ, ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಬಾರದ ಕಾರಣ ರೈತ ರಾಜಪ್ಪ ಸಾಲ ತೀರಿಸುವುದು ಹೇಗೆ ಎಂಬ ಭಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಮೃತ ರೈತನ ಹೊಲಕ್ಕೆ ರಿಪ್ಪನ್ ಪೇಟೆ ನಾಡ ಕಚೇರಿಯ ಉಪ ತಹಶೀಲ್ದಾರ್ ಹುಚ್ಚರಾಯಪ್ಪ, ಪ್ರಭಾರಿ ಕಂದಾಯ ನಿರೀಕ್ಷಕ ರೇಣುಕಾರಾಧ್ಯ, ಗ್ರಾಮ ಆಡಳಿತ ಅಧಿಕಾರಿ ಶ್ವೇತಾ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬಸ್ ನಿಲ್ದಾಣದಲ್ಲಿ ನಿಂತಿದ್ದ ಯುವತಿ ಪುಸಲಾಯಿಸಿ ಅತ್ಯಾಚಾರ