ತುಮಕೂರು: ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಬಾಲನ್ ಭ್ರಷ್ಟ ಅಧಿಕಾರಿಗಳಿಗೆ ಸ್ಮಾರ್ಟ್ ಸಿಟಿ ಕೆಲಸ ಹಂಚಿದ್ದಾರೆ. ಜೊತೆಗೆ ಪಾಲಿಕೆಯಲ್ಲಿ ಆರ್.ಟಿ.ಐ ಕಾರ್ಯಕರ್ತರ ಹಾವಳಿ ಹೆಚ್ಚಾಗಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆಯಲ್ಲಿ 41 ಎಂಜಿನಿಯರ್ ಸೇರಿ ವಿವಿಧ ಇಲಾಖೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಎಂಜಿನಿಯರ್ಗಳಿದ್ದಾರೆ. ಆದರೆ ಅವರು ನಗರದ ಅಭಿವೃದ್ಧಿ ಮಾಡುವ ಬದಲು ಅಧ್ವಾನ ಮಾಡುತ್ತಾ, ಹಣ ಲೂಟಿ ಮಾಡುತ್ತಿದ್ದಾರೆ. ನಗರ ಮುಂದೆ ರೋಗದ ನಗರವಾದರೂ ಅಚ್ಚರಿಪಡಬೇಕಿಲ್ಲ. ಈಗಾಗಲೇ ದೇಶಾದ್ಯಂತ ಕೊರೊನಾ ವೈರಸ್ ಭೀತಿ ಹೆಚ್ಚಿದೆ. ಹೀಗಿರುವಾಗ ನಗರದಲ್ಲಿ ಎಲ್ಲಿ ಹೋದರೂ ಧೂಳು ಆವರಿಸಿ ಸ್ವಚ್ಛತೆ ಇಲ್ಲವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕೊರೊನಾ ಬಂದರೆ ಏನು ಮಾಡಬೇಕು ಎಂದರು. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಎಲ್ಲಿ ಯಾವ ಕೆಲಸ ಆಗುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ದಕ್ಷ ಅಧಿಕಾರಿ ಎನಿಸಿಕೊಂಡ ಭೂಬಾಲನ್ ಭ್ರಷ್ಟ ಅಧಿಕಾರಿಗಳನ್ನು ಜೊತೆಗಿಟ್ಟುಕೊಂಡು ಜನರ ಬಳಿಗೆ ಹೋಗುತ್ತಿದ್ದಾರೆ ಎಂದು ಆರೋಪಿಸಿದರು.
ಹಣ ವಸೂಲಿ ಮಾಡುವ ಅಧಿಕಾರಿಗಳ ಜೊತೆ ಹೋಗುವ ಭೂಬಾಲನ್ರನ್ನು ಜನ ಅನುಮಾನದಿಂದ ನೋಡುವಂತಾಗಿದೆ. ಇಮ್ರಾನ್ ಪಾಷಾ ಎಂಬ ಆರ್.ಟಿ.ಐ ಕಾರ್ಯಕರ್ತ ಪಾಲಿಕೆಯಲ್ಲಿ ಠಿಕಾಣಿ ಹೂಡಿರುತ್ತಾನೆ. ಮಾಹಿತಿ ಹಕ್ಕಿನಲ್ಲಿ ಅರ್ಜಿ ಹಾಕಿ, ಅಧಿಕಾರಿಗಳನ್ನು ಹೆದರಿಸುತ್ತಾನೆ. ಹೀಗೆಯೇ ಹೆದರಿಸಿ ಈತ 20 ಲಕ್ಷದ ಕೆಲಸ ತೆಗೆದುಕೊಂಡಿದ್ದಾನೆ. ಇಂಥವರನ್ನು ಭೂಬಾಲನ್ ಮೊದಲು ದೂರವಿಟ್ಟು ಮಟ್ಟಹಾಕುವ ಕೆಲಸ ಮಾಡಬೇಕಿದೆ ಎಂದರು.