ತುಮಕೂರು : ಹೆಬ್ಬೂರು ಹೋಬಳಿಯ ನಾಗೇನಹಳ್ಳಿ ಸರ್ಕಾರಿ ಉರ್ದು ಶಾಲೆ ಮತ್ತು ಈದ್ಗಾ ಮೈದಾನವನ್ನು ಉಳಿಸಿ ಕೊಡುವಂತೆ ಒತ್ತಾಯಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ತುಮಕೂರು ತಾಲೂಕು ಹೆಬ್ಬೂರು ಹೋಬಳಿಯ ನಾಗೇನಹಳ್ಳಿ ಗ್ರಾಮದ ಸರ್ವೇ ನಂಬರ್ 56ರಲ್ಲಿ 1924ರಿಂದ ನಡೆಯುತ್ತಿರುವ ಉರ್ದು ಶಾಲೆ ಮತ್ತು ಈದ್ಗಾ ಮೈದಾನವನ್ನು ಕಬಳಿಸಿ ಕೊಂಡಿರುವ ಬಗ್ಗೆ ಕಳೆದ ಜೂನ್ 27ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು, ಇಲ್ಲಿಯವರೆಗೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮತ್ತೆ ಆ ಪ್ರದೇಶವನ್ನು ಭೂಗಳ್ಳರು ಕಬಳಿಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ನ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅತಿಕ್ ಅಹಮದ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ನ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅತಿಕ್ ಅಹಮದ್, ಗೌಸ್ಪೀರ್ ಖಾನ್ ಎಂಬ ವ್ಯಕ್ತಿ ಸರ್ಕಾರಿ ಉರ್ದು ಶಾಲೆ ಮತ್ತು ಈದ್ಗಾ ಮೈದಾನವನ್ನು ಕಬಳಿಕೆ ಮಾಡಿದ್ದರ ಬಗ್ಗೆ ಈಗಾಗಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು, ಇಲ್ಲಿಯವರೆಗೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸರ್ಕಾರಿ ಜಾಗದಲ್ಲಿ ಅಂಗಡಿಯನ್ನು ಇಡಲು ಮುಂದಾಗಿದ್ದು, ಈಗಲಾದರೂ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಸ್ತೆಗಿಳಿದು ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.