ತುಮಕೂರು: ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ತೆಂಗಿನಕಾಯಿ ಬೆಳೆಗಾರರ ಸಂಕಷ್ಟ ಮುಂದುವರಿದಿದೆ. ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಗಣನೀಯ ಪ್ರಮಾಣದಲ್ಲಿ ಕುಸಿದಿದ್ದು ಇದರಿಂದ ನಲುಗಿ ಹೋಗಿರುವ ಬೆಳೆಗಾರರಿಗೆ ಇದೀಗ ಬೆಂಬಲ ಬೆಲೆ ಖರೀದಿ ಮಾಡುತ್ತಿರುವ ಸಂದರ್ಭದಲ್ಲಿಯೂ ಗುಣಮಟ್ಟ ಪರೀಕ್ಷೆ ನಡೆಸಿ ಕೊಬ್ಬರಿ ದಾಸ್ತಾನನ್ನು ತಿರಸ್ಕಾರ ಮಾಡುತ್ತಿರುವುದು ಬೆಳೆಗಾರರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಜಿಲ್ಲೆಯ ತಿಪಟೂರು ಹಾಗೂ ತುರುವೇಕೆರೆ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಫೇಡ್ನಲ್ಲಿ ಕೊಬ್ಬರಿ ಖರೀದಿ ವೇಳೆ ಗುಣಮಟ್ಟದಿಂದ ಕೂಡಿಲ್ಲ ಎಂದು ಸಾಕಷ್ಟು ಕೊಬ್ಬರಿಯನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಇದರಿಂದ ಕಂಗಾಲಾಗಿರುವ ಬೆಳೆಗಾರರು ಮಾರುಕಟ್ಟೆಯಲ್ಲಿ ಹೊರಗಡೆ ಕನಿಷ್ಠ ಬೆಲೆಗೆ ಮಾರಾಟ ಮಾಡುತ್ತಿರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ನ್ಯಾಫೆಡ್ ಖರೀದಿಸುತ್ತಿರುವ ಅದರ ಮಾನದಂಡ ಪ್ರಕಾರ ಕೊಬ್ಬರಿಯು ಸ್ಪಷ್ಟವಾದ ಗಾತ್ರದಲ್ಲಿರಬೇಕು ಹೀಗಿದ್ದರೆ ಮಾತ್ರ ಅದನ್ನು ಖರೀದಿಸಲಾಗುವುದು. ಅಲ್ಲದೆ ಉಷ್ಣಾಂಶ (ಮಾಯಿಶ್ಚರೈಸರ್) ಇರುವಂತಹ ಕೊಬ್ಬರಿಯನ್ನು ಖರೀದಿಸಲು ನೆಫೆಡ್ ಹಿಂದೇಟು ಹಾಕುತ್ತಿದೆ. ಇದು ಕೊಬ್ಬರಿ ಬೆಳೆಗಾರರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಕೆಡಿಪಿ ಸಭೆಯಲ್ಲಿ ಪ್ರಾತ್ಯಕ್ಷಿತೆ ನೀಡಿರುವ ಕೊಬ್ಬರಿ ಖರೀದಿಯಲ್ಲಿ ಅನ್ಯಾಯ ಆಗುತ್ತಿದೆ ಎಂದು ಆರೋಪಿಸಿದ ಶಾಸಕ ಎಂ ಟಿ ಕೃಷ್ಣಪ್ಪ, ನಫೇಡ್ನಲ್ಲಿ ಕೊಬ್ಬರಿ ಖರೀದಿ ವೇಳೆ ಗುಣಮಟ್ಟದಲ್ಲ ಎಂದು ತಿರಸ್ಕಾರ ಮಾಡುತ್ತಿದ್ದು, ಅವೈಜ್ಞಾನಿಕವಾಗಿ ಅಧಿಕಾರಿಗಳು ಕೊಬ್ಬರಿ ಗುಣಮಟ್ಟ ಅಳೆಯುತ್ತಿದ್ದಾರೆ ಎಂದು ದೂರಿದರು.
ಕಳೆದ ವರ್ಷ 13,000 ರೂ. ಗೆ ಮಾರಾಟ.. ಪ್ರಸ್ತುತ ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಕ್ವಿಂಟಲ್ಗೆ ರೂ. 7,705 ಗಳಿಗೆ ಮಾರಾಟವಾಗುತ್ತಿದೆ. ಈ ಬೆಲೆಯು ಇತ್ತೀಚಿನ ವರ್ಷಗಳಲ್ಲಿ ಅತಿ ಕನಿಷ್ಠ ಬೆಲೆ ಎಂದು ಪರಿಗಣಿಸಲಾಗುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕ್ವಿಂಟಲ್ಗೆ ಕನಿಷ್ಠ 13,000 ಗಳಿಗೆ ಬಿಕರಿಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಅರ್ಧದಷ್ಟು ಬೆಲೆಗೆ ಬಿಕರಿಯಾಗುತ್ತಿದೆ.
ಇದನ್ನೂ ಓದಿ : Tomato rate: ಗಗನಕ್ಕೇರಿದ ಟೊಮೆಟೊ ಬೆಲೆ.. ತರಕಾರಿ ಕೊಳ್ಳಲು ಹಿಂದೇಟು ಹಾಕುತ್ತಿರುವ ಗ್ರಾಹಕರು
ಈಗಾಗಲೇ ತೋಟ ನಿರ್ವಹಣೆ ದೃಷ್ಟಿಯಿಂದ ರೈತರು ಅಪಾರ ಪ್ರಮಾಣದಲ್ಲಿ ಗೊಬ್ಬರ, ನೀರಾವರಿ ಸೇರಿದಂತೆ ಅನೇಕ ಖರ್ಚು ವೆಚ್ಚಗಳನ್ನು ಮಾಡಿ ಕಳೆದ ವರ್ಷದಂತೆ ಲಾಭಾಂಶ ಪಡೆಯುವ ಸಂತಸದಲ್ಲಿದ್ದರು. ಆದರೆ ಮಾರುಕಟ್ಟೆಯಲ್ಲಿನ ಸ್ಥಿತಿಗತಿಯಿಂದ ವಿಧಿ ಇಲ್ಲದೆ ಕನಿಷ್ಠ ಬೆಲೆಗೆ ಮಾರಾಟ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಸರ್ಕಾರದ ಬೆಂಬಲ ಬೆಲೆಯಡಿ ಮಾರಾಟ ಮಾಡಲು ಹೋದ ರೈತರಿಗೂ ಅಲ್ಲಿನ ಗುಣಮಟ್ಟ ಪರೀಕ್ಷೆ ಹಾಗೂ ನಿಯಮಾವಳಿಗಳು ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿವೆ.
ಇದನ್ನೂ ಓದಿ: ಕಬ್ಬಿನ ಎಫ್ಆರ್ಪಿ 10 ರೂಪಾಯಿ ಹೆಚ್ಚಿಸಿದ ಕೇಂದ್ರ ಸರ್ಕಾರ: ಪ್ರತಿ ಕ್ವಿಂಟಲ್ಗೆ ₹315 ನಿಗದಿ