ತುಮಕೂರು: ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ಬಸ್ ಚಾಲಕ ಮದ್ಯ ಸೇವನೆ ಮಾಡಿದ್ದನ್ನು ಗಮನಿಸಿದ ಪೋಷಕರು ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಘಟನೆ ಜಿಲ್ಲೆಯ ಮಧುಗಿರಿ ತಾಲೂಕಿನ ಐ ಡಿ ಹಳ್ಳಿಯಲ್ಲಿ ನಡೆದಿದೆ.
ಮಧುಗಿರಿ ಪಟ್ಟಣದಲ್ಲಿರುವ ಚಿರಕ್ ಪಬ್ಲಿಕ್ ಸ್ಕೂಲ್ KA-52, 4456 ಬಸ್ನ ಚಾಲಕ ಶಾಲಾ ಮಕ್ಕಳನ್ನು ಕರೆತರುವ ವೇಳೆ ಮಾರ್ಗ ಮಧ್ಯೆ ಮದ್ಯ ಸೇವನೆ ಮಾಡಿದ್ದಾನೆ ಎಂದು ಬಸ್ನಲ್ಲಿದ್ದ ಮಕ್ಕಳು ಆರೋಪಿಸಿದ್ದಾರೆ. ಅಲ್ಲದೆ ರಸ್ತೆಯಲ್ಲಿ ಸ್ಕೂಲ್ ಬಸ್ ಪಾಕ್೯ ಮಾಡಿ ಸ್ನೇಹಿತರೊಂದಿಗೆ ಮದ್ಯಸೇವನೆ ಮಾಡಿದ್ದಾನೆ.
ಸಂಜೆ 4.30 ಕ್ಕೆ ಮಧುಗಿರಿಯಿಂದ ಶಾಲಾ ಮಕ್ಕಳನ್ನು ಐಡಿಹಳ್ಳಿ ಗ್ರಾಮಕ್ಕೆ ನಿತ್ಯ ಆರು ಗಂಟೆಯೊಳಗೆ ಚಾಲಕ ಕರೆದುಕೊಂಡು ಬರುತ್ತಿದ್ದ. ಆದರೆ 7.30 ಗಂಟೆ ಆದರೂ ಕೂಡ ಗ್ರಾಮಕ್ಕೆ ಬಂದಿರಲಿಲ್ಲ. ಅಂತು ಇಂತು ಮಕ್ಕಳನ್ನು ಕರೆದುಕೊಂಡು ಬಂದ ಚಾಲಕನನ್ನು ವಿಚಾರಿಸಿದಾಗ ಪಾನಮತ್ತನಾಗಿರುವುದು ಬೆಳಕಿಗೆ ಬಂದಿದೆ. ಸ್ಥಳದಲ್ಲಿದ್ದ ಪೋಷಕರು ಆತನನ್ನು ತರಾಟೆಗೆ ತೆಗೆದುಕೊಂಡ ಕ್ಷಣ ಸ್ಥಳದಿಂದ ಪರಾರಿಯಾಗಿದ್ದಾನೆ.