ತುಮಕೂರು: ಕೊರೊನಾ ಹರಡುವಿಕೆಯನ್ನು ತಡೆಗಟ್ಟಲು ಪ್ರಸ್ತುತ ಸನ್ನಿವೇಶದಲ್ಲಿ ಹಂತ ಹಂತವಾಗಿ ಬೆಂಗಳೂರನ್ನು ಲಾಕ್ಡೌನ್ ಮಾಡುವುದು ಸೂಕ್ತವೆಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಸಲಹೆ ನೀಡಿದ್ದಾರೆ.
ನಗರದಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಕೊರೊನಾ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರವು ಮುಂಬೈ ಆಗದಂತೆ ಕ್ರಮ ಕೈಗೊಳ್ಳಬೇಕಿದೆ. ಲಾಕ್ಡೌನ್ ಸಡಿಲಿಕೆಯಿಂದ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ ಎಂದು ಅಭಿಪ್ರಾಯಪಟ್ಟರು.
ಕೊರೊನಾ ಸೋಂಕು ಹೆಚ್ಚಲಿದೆ ಎಂಬ ಕುರಿತು ಈ ಮೊದಲೇ ನಿರೀಕ್ಷೆ ಹೊಂದಲಾಗಿತ್ತು. ಸೆಪ್ಟಂಬರ್ ತಿಂಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಬಹುದು ಎಂದು ಈಗಾಗಲೇ ವೈದ್ಯಕೀಯ ಮೂಲಗಳು ಸ್ಪಷ್ಟಪಡಿಸಿವೆ. ಜನರಲ್ಲಿ ಸೋಂಕಿನ ಕುರಿತು ಭಯದ ವಾತಾವರಣ ಇದ್ದಿದ್ದರಿಂದಲೇ ಇದರ ಪ್ರಮಾಣ ಕಡಿಮೆ ಇತ್ತು. ಆದರೆ ಲಾಕ್ಡೌನ್ ಸಡಿಲಿಕೆ ನಂತರ ಜನರ ಬೇಕಾಬಿಟ್ಟಿ ಓಡಾಟದಿಂದ ಇದೀಗ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಮೊದಲ ಹಂತದ ಲಾಕ್ಡೌನ್ ನಿಂದ ಉತ್ತಮ ಫಲಿತಾಂಶ ದೊರೆತಿತ್ತು ಎಂದರು.
ಹಂತ-ಹಂತವಾಗಿಯಾದರೂ ಬೆಂಗಳೂರು ನಗರದಲ್ಲಿ ಲಾಕ್ಡೌನ್ ಮಾಡಬೇಕಿದೆ. ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಬೆಂಗಳೂರಿಗೆ ಬರುವ ಜನರು ತಮಗೆ ಅರಿವಿಲ್ಲದಂತೆ ಸೋಂಕನ್ನು ತರುತ್ತಿದ್ದಾರೆ ಎಂದರು.
ಡಿಕೆಶಿ ಪದಗ್ರಹಣ ಕುರಿತು ಮಾತನಾಡಿ, ಜುಲೈ 2 ರಂದು ಸರ್ಕಾರ ಅವಕಾಶ ಕೊಟ್ಟರೆ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಈ ವೇಳೆ ಸಂಪೂರ್ಣ ಮುಂಜಾಗ್ರತೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.