ತುಮಕೂರು : ದೇಗುಲದಲ್ಲಿನ ದೇವರ ಪೂಜೆಯ ಹಕ್ಕಿನ ಕುರಿತು ಉಂಟಾಗಿರುವ ಗೊಂದಲದಿಂದ ದೇವಸ್ಥಾನಕ್ಕೆ ಬೀಗ ಹಾಕಿಕೊಂಡು ಅರ್ಚಕ ಕಣ್ಮರೆಯಾಗಿರೋ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಕ್ಯಾಮೇನಹಳ್ಳಿ ಶ್ರೀಆಂಜನೇಯ ಸ್ವಾಮಿ ದೇವಾಲಯದಲ್ಲಿ ನಡೆದಿದೆ.
ಆಂಜನೇಯ ಸ್ವಾಮಿ ದೇವಾಲಯಕ್ಕೆ ಬೀಗ ಜಡಿದು ಕಾಣೆಯಾದ ಅರ್ಚಕ ರಾಮಚಾರ್ ಹುಡುಕಾಟದಲ್ಲಿ ಭಕ್ತವೃಂದ ತೊಡಗಿದೆ. ಇದ್ರಿಂದಾಗಿ ತುಮಕೂರು ಜಿಲ್ಲೆಯ ಇತಿಹಾಸ ಪ್ರಸಿದ್ದ ಪುಣ್ಯಕ್ಷೇತ್ರ ಕ್ಯಾಮೇನಹಳ್ಳಿ ಆಂಜನೇಯ ದೇವಾಲಯದಲ್ಲಿ ದೇವರ ದರ್ಶನ ಭಾಗ್ಯವಿಲ್ಲದೆ ಭಕ್ತರು ವಾಪಸ್ ತೆರಳುವಂತಾಗಿದೆ.
ದೇವಾಲಯ ವ್ಯವಸ್ಥಾಪನಾ ಸಮಿತಿ ಮತ್ತು ಅರ್ಚಕರ ನಡುವಿನ ಸಂಘರ್ಷದಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಆಂಜನೇಯ ಸ್ವಾಮಿ ರಥಸಪ್ತಮಿಗೆ ದೇವರಾಯನದುರ್ಗ ಅರ್ಚಕರ ನೇಮಕ ಹಿನ್ನೆಲೆಯಲ್ಲಿ ಈ ಸಂಘರ್ಷ ಸೃಷ್ಟಿಯಾಗಿದೆ.
ದೇವಾಲಯದ ಪೂಜೆಯ ಹಕ್ಕನ್ನು ತನಗೆ ನೀಡಬೇಕೆಂದು ದೇವಾಲಯದ ಅರ್ಚಕ ರಾಮಚಾರ್ ಒತ್ತಾಯಿಸುತ್ತಿದ್ದು, ಆಡಳಿತ ಮಂಡಳಿ ಮತ್ತು ಮುಜರಾಯಿ ಇಲಾಖೆ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಇದ್ರಿಂದ ಸಿಟ್ಟಿಗೆದ್ದಿರುವ ಅರ್ಚಕ ರಾಮಚಾರ್ ದೇಗುಲಕ್ಕೆ ಬೀಗ ಹಾಕಿದ್ದಾರೆ.