ತುಮಕೂರು: ಮೂರು ಗ್ರಾಮಗಳಲ್ಲಿ ಒಂದೇ ವರ್ಷದಲ್ಲಿ ಐದು ಮಂದಿ ಚಿರತೆ ದಾಳಿಯಿಂದ ಮೃತಪಟ್ಟಿದ್ದರು. ಈ ಪ್ರದೇಶಗಳಲ್ಲಿ ನಿರಂತರ ಕಾರ್ಯಾಚರಣೆ ನಡೆಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಕೊನೆಗೂ ಸೆರೆ ಹಿಡಿದಿದ್ದಾರೆ.
ಒಟ್ಟು 46 ಟ್ರ್ಯಾಕ್ ಕ್ಯಾಮೆರಾಗಳನ್ನು ಚಿರತೆಗೆ ಬಲಿಯಾಗಿದ್ದ ಜನರು ವಾಸಿಸುತ್ತಿದ್ದ ಪ್ರದೇಶದಲ್ಲಿ ಅಳವಡಿಸಲಾಗಿತ್ತು. ಈ ಮೂಲಕ ಚಿರತೆಯ ಚಲನವಲನವನ್ನು ಸಂಗ್ರಹಿಸಲಾಗುತ್ತಿತ್ತು. ಹೀಗೆ ಅಳವಡಿಸಲಾದ ಕ್ಯಾಮೆರಾಗಳಲ್ಲಿ ಗಂಡು ಚಿರತೆ ಅತಿ ಹೆಚ್ಚು ಬಾರಿ ಸೆರೆಯಾಗಿತ್ತು.
ಒಂದು ವರ್ಷದಿಂದ ಈ ಗಂಡು ಚಿರತೆ ಓಡಾಡುತ್ತಿದ್ದ ಪ್ರದೇಶದಲ್ಲಿ ಅರಣ್ಯ ಇಲಾಖೆ ಟ್ರ್ಯಾಪ್ ಬೋನ್ ಸಹ ಅಳವಡಿಸಿದೆ. ಆದ್ರೆ ಚಿರತೆ ಮಾತ್ರ ಬೋನಿಗೆ ಬೀಳುತ್ತಿರಲಿಲ್ಲ. ಇದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಾಕಷ್ಟು ತಲೆನೋವು ತರಿಸಿತ್ತು.
ಅರಣ್ಯ ಇಲಾಖೆ ಸಾಕಷ್ಟು ಯೋಜನೆ ರೂಪಿಸಿ, ಬನ್ನಿ ಕುಪ್ಪೆ ಪ್ಲಾಂಟೇಷನ್ನಲ್ಲಿ ಕೊಟ್ಟಿಗೆ ಸ್ವರೂಪದಲ್ಲಿ ಬೋನು ಇರಿಸಿತ್ತು. ಅಂತಿಮವಾಗಿ ಚಿರತೆ ಬೋನಿಗೆ ಬಿದ್ದಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ತೆರಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಬೋನಿನಲ್ಲಿದ್ದ ಚಿರತೆಗೆ ಅರಿವಳಿಕೆ ಮದ್ದು ನೀಡಿದ್ದಾರೆ. ಪ್ರಜ್ಞೆ ತಪ್ಪಿದ ಪ್ರಾಣಿಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಬಿಟ್ಟಿದ್ದಾರೆ.
ಈ ಭಾಗದಲ್ಲಿ ಇನ್ನೂ ಎರಡು ಚಿರತೆಗಳು ಓಡಾಡುತ್ತಿದ್ದು, ಅವುಗಳನ್ನು ಸೆರೆ ಹಿಡಿಯಲು ಇಲಾಖೆ ಕಾರ್ಯಾಚರಣೆ ನಡೆಸುತ್ತಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್ ತಿಳಿಸಿದರು.
ಓದಿ: ಕುಮಾರಸ್ವಾಮಿ ಹುಟ್ಟುಹಬ್ಬ: ಸಿಹಿ ಹಂಚಿ ಸಂಭ್ರಮಿಸಿದ ಜೆಡಿಎಸ್ ಕಾರ್ಯಕರ್ತರು