ತುಮಕೂರು: ದೆಹಲಿಯಲ್ಲಿ ತಬ್ಲಿಘಿ ಜಮಾಅತ್ ಗೆ ಇವ್ರೆಲ್ಲಾ ಯಾಕೆ ಸೇರಿದ್ರು, ಇದರ ಹಿಂದಿನ ಉದ್ದೇಶ ಏನು, ಕುತಂತ್ರ ಏನಾದ್ರೂ ಇದ್ಯಾ ಎಂಬ ಬಗ್ಗೆ ಕೇಂದ್ರ ಸರ್ಕಾರ ಸಮಗ್ರ ತನಿಖೆ ನಡೆಸಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ತಾಲೂಕಿನ ಹೊನ್ನುಡಿಕೆ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಮಾಅತ್ನಲ್ಲಿ ಭಾಗವಹಿಸಿದ್ದವರು ವಾಪಸ್ ಬಂದ ಬಳಿಕ ಯಾಕೆ ಆಸ್ಪತ್ರೆಗೆ ಹೋಗಿಲ್ಲಾ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಕೊರೊನಾ ವೈರಸ್ ಗೊಂದಲ ಮುಗಿದ ಬಳಿಕ ಏನ್ ಮಾಡ್ಬೇಕೊ ಅದನ್ನ ಸರ್ಕಾರ ಮಾಡುತ್ತದೆ ಎಂದರು.
ಇದೇ ವೇಳೆ ಚಿಕ್ಕಮಗಳೂರು ಜಿಲ್ಲೆಯ ಬಿಜೆಪಿ ಕಾರ್ಯಕರ್ತರಲ್ಲಿ ಕಾರ್ಯ ವೈಖರಿಯಲ್ಲಿ ಅಸಮಾಧಾನದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನಮ್ಮ ಉಡುಪಿ- ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿತರಿಲ್ಲ. ರೇಷನ್ ಕಾರ್ಡ್ ಇಲ್ಲದವರು ಬೆರಳೆಣಿಕೆ ಸಂಖ್ಯೆಯಲ್ಲಿದ್ದಾರೆ. ರೇಷನ್ ಕಾರ್ಡ್ ಇಲ್ಲದವರಿಗೆ ಸ್ವತಃ ನಾನೇ ಅಕ್ಕಿ ಬೇಳೆ ಹಂಚಿ ಬಂದಿದ್ದೇನೆ ಎಂದು ತಿಳಿಸಿದರು.
ಈಗ ನನ್ನ ಮೇಲೆ ವಿನಾಕಾರಣ ಆರೋಪವನ್ನು ಹೊರಿಸುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ರಾಜಕಾರಣ ಮಾಡೋರಿಗೆ ನಾನು ಉತ್ತರಿಸಲ್ಲ. ಪ್ರಧಾನಿಯವರ ಆದೇಶದ ಬಳಿಕ ನಾನು ಫೀಲ್ಡಿನಲ್ಲಿ ಇದ್ದು ಕೆಲ್ಸ ಮಾಡ್ತಿದ್ದೇನೆ. ಯಾರು ಕೆಲಸ ಮಾಡ್ತಿಲ್ವೋ, ಅವ್ರು ಮನೆಯಲ್ಲಿ ಕುಳಿತು ಹೀಗೆ ಬರೆಯುತ್ತಿದ್ದಾರೆ ಎಂದು ಶೋಭಾ ಟಾಂಗ್ ಕೊಟ್ಟರು.
ನನ್ನ ವಾಟ್ಸ್ಯಾಪ್, ಫೇಸ್ಬುಕ್, ಟ್ವಿಟ್ಟರ್ ನೋಡಿ ನಾನೇನು ಮಾಡಿದ್ದೇನೆ ಗೊತ್ತಾಗುತ್ತೆ. ಅದನ್ನ ನೋಡಿಯಾದ್ರೂ ಪಾಠ ಕಲಿತು ಇನ್ನೊಬ್ಬರಿಗೆ ಸಹಾಯ ಮಾಡಿ ಎಂದು ತಮ್ಮ ವಿರೋಧಿಗಳಿಗೆ ಸಂಸದೆ ತಿರುಗೇಟು ನೀಡಿದರು.