ತುಮಕೂರು : ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸಂಸದರಾಗಿ ಆಯ್ಕೆಯಾಗಿರುವ ಜಿ ಎಸ್ ಬಸವರಾಜ್ ವೈಯಕ್ತಿಕವಾಗಿ ಜಿಲ್ಲೆಯ ಕಾಂಗ್ರೆಸ್ ಮುಖಂಡರ ಮನಸ್ಸನ್ನು ಗೆದ್ದು ಆಯ್ಕೆಯಾಗಿದ್ದಾರೆ ಎಂದು ಕಾಂಗ್ರೆಸ್‌ನ ಮಾಜಿ ಶಾಸಕ ಕೆ ಎನ್ ರಾಜಣ್ಣ ಹೇಳಿದ್ದಾರೆ.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರಿಗೆ ಬಿಜೆಪಿ ಮುಖಂಡರಿಗಿಂತ ಕಾಂಗ್ರೆಸ್ ಮುಖಂಡರೇ ಹೆಚ್ಚು ಸಂಪರ್ಕದಲ್ಲಿದ್ದಾರೆ. ಬಿಜೆಪಿ ಸಂಸದರಾಗಿ ಆಯ್ಕೆಯಾಗಿರುವ ಜಿಎಸ್ ಬಸವರಾಜ್ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದವರು. ಅನೇಕ ಬಾರಿ ಸಂಸದರಾಗಿ ಜಿಲ್ಲೆಯಲ್ಲಿ ಕೆಲಸ ಮಾಡಿದವರು. ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಭದ್ರಕೋಟೆ. ಆದರೆ, ಇದು ಜೆಡಿಎಸ್ ಭದ್ರಕೋಟೆಯಲ್ಲ ಎಂದರು.
ಕಾಂಗ್ರೆಸ್ ಕಾರ್ಯಕರ್ತರಿಗೆ ಸರಿಯಾಗಿ ಮನವರಿಕೆ ಮಾಡಿಕೊಡಬೇಕಿದೆ. ಬಿಜೆಪಿ ಎಂಬುದು ಜಿಲ್ಲೆಯಲ್ಲಿ ಕೆಲವೇ ಕ್ಷೇತ್ರಕ್ಕೆ ಸೀಮಿತವಾಗಿದೆ. ಅಲ್ಲದೆ ಕೆಲವೆಡೆ ಬಿಜೆಪಿಗೆ ಬೆಲೆಯಿಲ್ಲ ಎಂದರು. ಮೈತ್ರಿ ಅಭ್ಯರ್ಥಿ ಸೋಲಲು ಜೀರೋ ಟ್ರಾಫಿಕ್ ಕಾರಣ ಎಂದು ಪರೋಕ್ಷವಾಗಿ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರನ್ನು ಟೀಕಿಸಿದರು. ಇನ್ನೊಂದು ವಾರದಲ್ಲಿ ಜೀರೋ ಟ್ರಾಫಿಕ್‌ನ ಜೀರೋ ಮಾಡುತ್ತೇವೆ. ಮೋದಿ ಪ್ರಮಾಣ ವಚನ ಸ್ವೀಕಾರ ಮಾಡುವವರೆಗೂ ಮಾತ್ರ ಮೈತ್ರಿ ಸರ್ಕಾರಕ್ಕೆ ಉಳಿವು. ಜೂನ್ 10ರೊಳಗೆ ಬಹುತೇಕ ರಾಜ್ಯ ಸರ್ಕಾರವೇ ಅಸ್ತಿತ್ವದಲ್ಲಿ ಇರುವುದಿಲ್ಲ ಎಂದು ಹೇಳಿದರು.
ನಾನು ಕಾಂಗ್ರೆಸ್ ಪಕ್ಷದಲ್ಲಿ ಇರುತ್ತೇನೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖವಾಡ ಹಾಕಿಕೊಂಡು ಅನ್ಯಾಯ ಮಾಡುತ್ತಿದ್ದಾರೆ. ಅವರಿಗೆಲ್ಲ ತಕ್ಕ ಪಾಠ ಕಲಿಸುತ್ತೇನೆ ಎಂದರು.