ತುಮಕೂರು: ತುಮಕೂರು ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ ಮಾರ್ಚ್ 5ರಂದು ನಡೆಯಲಿದ್ದು, ಈ ಬಾರಿ ದಾಖಲೆ ಪ್ರಮಾಣದಲ್ಲಿ 147 ಸಂಶೋಧನಾ ಅಭ್ಯರ್ಥಿಗಳಿಗೆ ಪಿಹೆಚ್ಡಿ ಪದವಿ ಪ್ರದಾನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ 73 ವಿದ್ಯಾರ್ಥಿಗಳಿಗೆ 92 ಚಿನ್ನದ ಪದಕ ಹಾಗೂ ಹಾಗೂ 6 ನಗದು ಬಹುಮಾನಗಳನ್ನು ವಿತರಿಸಲಾಗುತ್ತದೆ. ಒಟ್ಟು 1,716 ವಿದ್ಯಾರ್ಥಿಗಳು ಸ್ನಾತಕೋತ್ತರ, 7,992 ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರ ಸ್ವೀಕರಿಸಲಿದ್ದಾರೆ. ಒಟ್ಟು 9,853 ವಿದ್ಯಾರ್ಥಿಗಳಿಗೆ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಗುತ್ತಿದೆ ಎಂದು ವಿವಿಯ ಉಪಕುಲಪತಿ ವೈ.ಎನ್. ಸಿದ್ದೇಗೌಡ ಮಾಹಿತಿ ನೀಡಿದ್ದಾರೆ.
ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಗೆ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಬೆಂಗಳೂರಿನ ಐಎಎಸ್ ಅಧಿಕಾರಿ ಪ್ರಸಾದ್ ಭಾಜನರಾಗಲಿದ್ದಾರೆ. ಶಿಕ್ಷಣ, ವೈದ್ಯಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು ಕಿದ್ವಾಯಿ ಕ್ಯಾನ್ಸರ್ ಫೌಂಡೇಶನ್ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದ ವೇಳೆ ಕ್ಯಾನ್ಸರ್ ರೋಗಿಗಳಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ಕೊಡಿಸುವ ಮೂಲಕ ಬಡಜನರಿಗೆ 36 ಕೋಟಿಯಷ್ಟು ವೈದ್ಯಕೀಯ ವೆಚ್ಚ ಉಳಿತಾಯ ಮಾಡಿದ್ದಾರೆ.
ತಮ್ಮ ಪ್ರತಿಷ್ಠಾನದಿಂದ 1.2 ಕೋಟಿ ದೇಣಿಗೆ ನೀಡಿ ಕಿದ್ವಾಯಿ ಸಂಸ್ಥೆಯಲ್ಲಿ ರಕ್ತನಿಧಿ ಕೇಂದ್ರ ಸ್ಥಾಪಿಸಿದ್ದಾರೆ. ಲಯನ್ಸ್ ಕ್ಲಬ್ ಆಫ್ ಬೆಂಗಳೂರು ವೆಸ್ಟ್ ಡ್ರೆಸ್ ಗೌರವ ಕಾರ್ಯದರ್ಶಿಯಾಗಿ ಉಚಿತ ನೇತ್ರ ಚಿಕಿತ್ಸೆ ಮಾಡಿಸಿದ್ದಾರೆ. ಆರ್ಯವೈಶ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾಗಿದ್ದ ವೇಳೆ 11,000 ವಿದ್ಯಾರ್ಥಿಗಳಿಗೆ 8.5 ಕೋಟಿ ರೂ. ಮೊತ್ತದ ವಿದ್ಯಾರ್ಥಿವೇತನ ನೀಡಿದ್ದಾರೆ. ಪ್ರಸಾದ್ ಅವರು ಎಫ್ಕೆಸಿಸಿಐ ಹಿರಿಯ ಉಪಾಧ್ಯಕ್ಷರಾಗಿದ್ದು, 4 ದಶಕಗಳಿಂದ ಬೆಂಗಳೂರಿನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ: ಮತ್ತೆ ಟ್ರಸ್ಟ್ ವ್ಯಾಪ್ತಿಗೊಳಪಟ್ಟ ಗೊರವನಹಳ್ಳಿ ಲಕ್ಷ್ಮಿ ದೇವಾಲಯ ಆಡಳಿತ!