ತುಮಕೂರು /ಪಾವಗಡ: ವೆಂಕಮ್ಮನಹಳ್ಳಿ ಗ್ರಾಮದಲ್ಲಿ 2005ರಲ್ಲಿ ನಡೆದಿದ್ದ ಪೊಲೀಸ್ ಹತ್ಯಾಕಾಂಡದ ಆರೋಪಿಯಾಗಿರುವ ತೆಲಂಗಾಣ ಬಂಡಾಯ ಕವಿ ಗದ್ದರ್ ಪಾವಗಡ ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
ಘಟನೆಯ ಹಿನ್ನೆಲೆ:
2005ರಲ್ಲಿ ಚಿಕ್ಕಮಗಳೂರಿನಲ್ಲಿ ನಕ್ಸಲ್ ನಾಯಕ ಸಾಕೇತ್ ರಾಜನ್ನನ್ನು ಪೊಲೀಸರು ಎನ್ಕೌಂಟರ್ ಮಾಡಿದ್ದರು. ಇದಕ್ಕೆ ಪ್ರತೀಕಾರವಾಗಿ ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿ ಗ್ರಾಮದಲ್ಲಿ 2005ರಲ್ಲಿ ಸರ್ಕಾರಿ ಶಾಲೆಯಲ್ಲಿ ತಂಗಿದ್ದ ಪೊಲೀಸರನ್ನು ನಕ್ಸಲರು ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ 90 ಜನ ಆರೋಪಿಗಳಿದ್ದರು. ಇವರಲ್ಲಿ ಗದ್ದರ್ ಮತ್ತು ವರವರರಾವ್ ಆರೋಪಿಗಳಾಗಿದ್ದು, ವರವರರಾವ್ ಎರಡು ತಿಂಗಳ ಹಿಂದೆ ನ್ಯಾಯಾಲಯಕ್ಕೆ ಹಾಜಾರಾಗಿದ್ದರು.
ತೆಲಂಗಾಣದ ಬಂಡಾಯ ಕವಿ ಗದ್ದರ್ ಹೈಕೋರ್ಟ್ ನಿರ್ದೇಶನದಂತೆ ಇಂದು ಪಾವಗಡ ನ್ಯಾಯಾಲಯಕ್ಕೆ ಹಾಜರಾಗಿದ್ದು, ಪೊಲೀಸ್ ಇಲಾಖೆ ಸೂಕ್ತ ಭದ್ರತೆ ಕೈಗೊಂಡಿದೆ.