ತುಮಕೂರು: ಹೆಬ್ಬಾಕ ಸರ್ಕಾರಿ ಶಾಲೆಯ 60 ರಿಂದ 70 ವಿದ್ಯಾರ್ಥಿಗಳು ಒಂದೇ ಬಾರಿಗೆ ವರ್ಗಾವಣೆ ಪತ್ರ ತೆಗೆದುಕೊಂಡು ನರಸಾಪುರ ಮತ್ತು ಬೆಳ್ಳಾವಿ ಶಾಲೆಗೆ ಸೇರ್ಪಡೆ ಆಗಿದ್ದಾರೆ. ಇದಕ್ಕೆ ಅಲ್ಲಿನ ಶಿಕ್ಷಕರು ಸರಿಯಾದ ರೀತಿಯಲ್ಲಿ ಪಾಠ-ಪ್ರವಚನ ಮಾಡುತ್ತಿಲ್ಲ ಎಂಬುದೇ ಕಾರಣ ಎಂದು ತಾಲೂಕು ಪಂಚಾಯಿತಿ ಸದಸ್ಯ ವಿಜಯಕುಮಾರ್ ಆರೋಪಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷ ಗಂಗಾಂಜನೇಯ ನೇತೃತ್ವದಲ್ಲಿ ಬುಧವಾರ ಸಾಮಾನ್ಯ ಸಭೆ ನಡೆಸಲಾಯಿತು. ಈ ವೇಳೆ ತಾಲೂಕು ಪಂಚಾಯಿತಿ ಸದಸ್ಯ ವಿಜಯಕುಮಾರ್ ಮಾತನಾಡಿ, ಹೆಬ್ಬಾಕ ಸರ್ಕಾರಿ ಶಾಲೆಯ 60 ರಿಂದ 70 ವಿದ್ಯಾರ್ಥಿಗಳು ಒಂದೇ ಬಾರಿಗೆ ವರ್ಗಾವಣೆ ಪತ್ರ ತೆಗೆದುಕೊಂಡು ನರಸಾಪುರ ಮತ್ತು ಬೆಳ್ಳಾವಿ ಶಾಲೆಗೆ ಸೇರ್ಪಡೆ ಆಗಿದ್ದಾರೆ. ಇದಕ್ಕೆ ಅಲ್ಲಿನ ಶಿಕ್ಷಕರು ಸರಿಯಾದ ರೀತಿಯಲ್ಲಿ ಪಾಠ-ಪ್ರವಚನ ಮಾಡುತ್ತಿಲ್ಲ ಎಂಬುದೇ ಕಾರಣ ಎಂದು ಶಿಕ್ಷಕರ ಹಾಗೂ ಬಿ.ಇ.ಓ ರಂಗಧಾಮಪ್ಪ ಅವರ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಬಿ.ಇ.ಓ ರಂಗಧಾಮಪ್ಪ, ಮಕ್ಕಳು ತಮಗಿಷ್ಟ ಬಂದ ಶಾಲೆಗೆ ಸೇರಬಹುದು. ಅವರನ್ನು ನಾವು ನಿರ್ಬಂಧಿಸುವ ಅವಕಾಶವಿಲ್ಲ. ಆದರೆ, ಕೆಲ ಶಿಕ್ಷಕರಿಗೆ ಆರೋಗ್ಯ ಸರಿಯಿಲ್ಲ ಮತ್ತೊಬ್ಬರಿಗೆ ಕಿವಿ ಸರಿಯಾಗಿ ಕೇಳಿಸುತ್ತಿಲ್ಲ ಎಂಬುದಾಗಿ ತಿಳಿದುಬಂದಿದೆ. ಈಗಾಗಲೇ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ ಎಂದರು.
ತದನಂತರ ಬಿ.ಇ.ಓ ಮಾತಿಗೆ ಪ್ರತಿಕ್ರಿಯಿಸಿದ ತಾ.ಪಂ ಸದಸ್ಯ ವಿಜಯಕುಮಾರ್, ಮಕ್ಕಳ ನಿರ್ಬಂಧದ ಬಗ್ಗೆ ನಾನು ಮಾತನಾಡುತ್ತಿಲ್ಲ. ಹೆಬ್ಬೂರಿನ ಸರ್ಕಾರಿ ಶಾಲೆಯಲ್ಲಿರುವ ಶಿಕ್ಷಕರು ಸರಿಯಾದ ರೀತಿಯಲ್ಲಿ ಪಾಠ ಮಾಡುತ್ತಿಲ್ಲ ಹಾಗಾಗಿ ವಿದ್ಯಾರ್ಥಿಗಳು ಶಾಲೆಯನ್ನು ತೊರೆದು ಬೆಳ್ಳಾವಿ ಶಾಲೆಗೆ ಸೇರ್ಪಡೆಯಾಗುತ್ತಿದ್ದಾರೆ. ಶಾಲೆಯಲ್ಲಿ ಕೇವಲ 4 ಶಿಕ್ಷಕರಿದ್ದು ದೈಹಿಕ ಶಿಕ್ಷಕರು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ದೂರಿದರು.